ಸಾರಾಂಶ
ಭಾವ ಸಾರ ಕ್ಷತ್ರಿಯ ಸಮಾಜದ ನೂತನ ಸಮುದಾಯ ಭವನಕ್ಕೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಾವಸಾರ ಕ್ಷತ್ರಿಯ ಸಮಾಜ ಸಣ್ಣ ಸಮಾಜವಾಗಿದ್ದು ಆ ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಲು ಸರ್ಕಾರ ₹25 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ಭಾನುವಾರ ಪಟ್ಟಣದ ಜೈಲ್ ರಸ್ತೆಯಲ್ಲಿ ಭಾವ ಸಾರ ಕ್ಷತ್ರಿಯ ಸಮಾಜದ ನೂತನ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಭಾವಸಾರ ಕ್ಷತ್ರಿಯ ಸಮಾಜದವರು ₹15 ಲಕ್ಷ ವೆಚ್ಚದಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ನಾನು ಗುದ್ದಲಿ ಪೂಜೆ ಮಾಡಿದ ಕಾಮಗಾರಿಗಳನ್ನು ಪೂರೈಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ. ಶಾಸಕ ಟಿ.ಡಿ. ರಾಜೇಗೌಡರು ಸಹ ಈ ಸಮುದಾಯ ಭವನಕ್ಕೆ ಅಗತ್ಯವಿರುವ ನೆರವು ನೀಡಬೇಕು. ಆದಷ್ಟು ಬೇಗ ಸಮುದಾಯ ಭವನದ ಕಟ್ಟಡದ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.ಮುಖ್ಯ ಅತಿಥಿಯಾಗಿದ್ದ ಶಾಸಕ ಟಿ.ರಾಜೇಗೌಡ ಮಾತನಾಡಿ, ಭಾವಸಾರ ಕ್ಷತ್ರಿಯ ಸಮಾಜದವರು ಶ್ರಮಜೀವಿ ಗಳಾಗಿದ್ದು ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದಾರೆ. ಸದಾ ಒತ್ತಡದ ನಡುವೆ ಕೆಲಸ ಮಾಡುತ್ತಾರೆ. ಇಂತಹ ಸಣ್ಣ ಸಮಾಜ ವನ್ನು ಸರ್ಕಾರ ಗುರುತಿಸಿದೆ. ಹಂತ, ಹಂತವಾಗಿ ಸಮದಾಯ ಭವನಕ್ಕೆ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ಶೃಂಗೇರಿ ಕ್ಷೇತ್ರಕ್ಕೆ ವರ್ಷಕ್ಕೆ ₹250 ಕೋಟಿ ಗ್ಯಾರಂಟಿ ಯೋಜನೆ ನೆರವು ಬರುತ್ತಿದೆ. ಸಿದ್ದರಾಮಯ್ಯ ಸರ್ಕಾರ ಶೋಷಿತ ಸಮಾಜವನ್ನು ಗುರುತಿಸಿ ಸಹಾಯ ಮಾಡುತ್ತಿದೆ ಎಂದರು.ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಭಾವಸಾರ ಕ್ಷತ್ರಿಯ ಸಮಾಜದವರು ನರಸಿಂಹ ರಾಜಪುರದ ಮೂಲ ನಿವಾಸಿಗಳಾಗಿದ್ದಾರೆ. ಬಹಳ ವರ್ಷಗಳ ಹಿಂದೆ ಜವಳಿ ಅಂಗಡಿ ನಡೆಸುತ್ತಿದ್ದರು. ಭಾವಸಾರ ಕ್ಷತ್ರಿಯ ಸಮಾಜದ ಸಮುದಾಯ ಭವನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ₹25 ಲಕ್ಷ ಮಾಡಿಸಿಕೊಟ್ಟಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿದಂತೆ ಭಾವಸಾರ ಸಮಾಜಕ್ಕೆ ಸಮುದಾಯಭವನ ನಿರ್ಮಿಸಿಕೊಟ್ಟಿದ್ದು ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.
ತಾಲೂಕು ಭಾವ ಸಾರ ಕ್ಷತ್ರಿಯ ಸಮಾಜದ ಕಾರ್ಯದರ್ಶಿ ಜ್ಞಾನೇಶ್ ಮಾತನಾಡಿ, 1800 ವರ್ಷದ ಹಿಂದೆ ಸಿಂದ್ ಪ್ರಾಂತ್ಯದಲ್ಲಿ ನಮ್ಮ ಸಮಾಜ ಇತ್ತು ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಹಿಂದಿನಿಂದಲೂ ಟೈಲರಿಂಗ್ ಕಸಬು ಮಾಡುತ್ತಿದ್ದೆವು. ಕಾಲ ಕ್ರಮೇಣ ಸಮಾಜದವರು ಹಂಚಿ ಹೋಗಿದ್ದಾರೆ. ನರಸಿಂಹರಾಜಪುರ ಭಾಗದಲ್ಲಿ 40 ರಿಂದ 50 ಮನೆ ಗಳಿವೆ.₹15 ಲಕ್ಷ ವೆಚ್ಚದಲ್ಲಿ ನಿವೇಶನ ಖರೀದಿಸಿ ಅಂದಾಜು ₹1.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸು ತ್ತಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಮಗದ ಅಧ್ಯಕ್ಷ ಎಂ.ಶ್ರೀನಿವಾಸ್, ಶಾಸಕ ಟಿ.ಡಿ.ರಾಜೇಗೌಡ ಹಾಗೂ ಸಮಾಜದ ಮುಖಂಡ ಕೆ.ವಿ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಸಭೆ ಅಧ್ಯಕ್ಷತೆಯನ್ನು ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವೆಂಕಟೇಶ್ ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಭಾನು, ತಾಲೂಕು ಭಾವಸಾರ ಮಹಿಳಾ ಸಂಘದ ಅಧ್ಯಕ್ಷೆ ರೀನಾ ಮೋಹನ್, ವಿನಯಶ್ರೀ , ಮಮತ ನಾಗರಾಜ್ ಅರ್ಚನ ಇದ್ದರು.