ರೆಡ್ಡಿ ಮನೆಗೆ ಗುಂಡು ಹಾರಿಸಿದ ವೀಡಿಯೋ, ಫೋಟೋಗಳು, ಮೃತ ಯುವಕನ ಕುಟುಂಬ ಸದಸ್ಯರು ನೀಡಿದ ದೂರಿನನ್ವಯ ಗುರುಚರಣ ಸಿಂಗ್ ಅವರನ್ನು ಬಂಧಿಸಲಾಗಿದೆ.

ಬಳ್ಳಾರಿ: ನಗರದ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ಜರುಗಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ರೆಡ್ಡಿ ಮನೆಯ ಕಡೆಗೆ ಗುಂಡು ಹಾರಿಸಿದ ಎನ್ನಲಾದ ಖಾಸಗಿ ಗನ್‌ಮ್ಯಾನ್ ಗುರುಚರಣ ಸಿಂಗ್ ಸೇರಿದಂತೆ ಇತರ 26 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೆಡ್ಡಿ ಮನೆಗೆ ಗುಂಡು ಹಾರಿಸಿದ ವೀಡಿಯೋ, ಫೋಟೋಗಳು, ಮೃತ ಯುವಕನ ಕುಟುಂಬ ಸದಸ್ಯರು ನೀಡಿದ ದೂರಿನನ್ವಯ ಗುರುಚರಣ ಸಿಂಗ್ ಅವರನ್ನು ಬಂಧಿಸಲಾಗಿದೆ. ಉಳಿದ ಮೂವರು ಖಾಸಗಿ ಗನ್‌ಮ್ಯಾನ್‌ಗಳನ್ನು ಖಾಸಗಿ ಲಾಡ್ಜ್‌ನಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಗಳ ಪೈಕಿ 25 ಜನರ ಬಂಧನ ಮಾತ್ರ ತೋರಿಸಿರುವ ಪೊಲೀಸರು, ಗುರುಚರಣ ಸಿಂಗ್ ಬಂಧನವನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ, ಘಟನೆಯ ಪ್ರಮುಖ ಆರೋಪಿ ಎನ್ನಲಾದ ಗುರುಚರಣಸಿಂಗ್ ಅವರು ವಾಸವಾಗಿದ್ದ ಎಂಆರ್‌ವಿ ಬಡಾವಣೆಯ ನಿವಾಸದಲ್ಲಿ ಪೊಲೀಸರು ಭಾನುವಾರ ಸಂಜೆ ಮಹಜರು ಮಾಡಿದ್ದಾರೆ. ಇದೇ ವೇಳೆ ಕೆಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಳಿಕ ಆರೋಗ್ಯ ತಪಾಸಣೆ ನಡೆಸಿ, ಎಸ್ಪಿ ಕಚೇರಿಗೆ ಕರೆತಂದು ತನಿಖೆಯನ್ನು ಮುಂದುವರಿಸಿದ್ದಾರೆ.

ಮೃತ ಯುವಕ ರಾಜಶೇಖರ ರೆಡ್ಡಿ ಕುಟುಂಬ ಸದಸ್ಯರು ನೀಡಿದ ದೂರನ್ನಾಧರಿಸಿ ಖಾಸಗಿ ಗನ್‌ಮ್ಯಾನ್ ಗುರುಚರಣ ಸಿಂಗ್ ಅವರ ಬಂಧನವಾಗಿದ್ದು, ಪೊಲೀಸರು ದಾಖಲಿಸಿಕೊಂಡ ಸ್ವಯಂ ದೂರು (ಸುಮೋಟೋ) ಹಿನ್ನೆಲೆಯಲ್ಲಿ 26 ಜನರ ಬಂಧನವಾಗಿದೆ ಎಂದು ಗೊತ್ತಾಗಿದೆ. ಖಾಸಗಿ ಗನ್‌ನ ಗುಂಡೇಟಿನಿಂದ ಮೃತಪಟ್ಟ ಯುವಕ ರಾಜಶೇಖರ್‌ ದೇಹದಲ್ಲಿ ಗುರುಚರಣ್‌ ಸಿಂಗ್‌ ಅವರಿಂದ ಸಿಡಿಸಿದ ಗನ್‌ನ ಬುಲೆಟ್‌ ಕಾರಣವಾಗಿದೆ ಎಂಬುದು ದೃಢಪಟ್ಟಿದೆ. ಹೀಗಾಗಿ, ಬಂಧಿಸಿರುವ ಖಾಸಗಿ ಗನ್‌ಮ್ಯಾನ್‌ನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಬಂಧನವಾಗಿರುವ 25 ಜನರನ್ನು ಬೆಂಗಳೂರಿಗೆ ರವಾನಿಸಲಾಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಪ್ರಕರಣದ ಆರೋಪಿಗಳಲ್ಲಿ ಜನಪ್ರತಿನಿಧಿಗಳು ಇರುವುದರಿಂದ ಇದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಘಟನೆಯಲ್ಲಿ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತೀಶ್‌ ರೆಡ್ಡಿ ಅವರನ್ನು ಸಹ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬ್ಯಾನರ್‌ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಈ ವರೆಗೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಶಾಸಕ ನಾರಾ ಭರತ್‌ ರೆಡ್ಡಿ ಅವರ ಬೆಂಬಲಿಗರಿಂದ ಮೂರು ಪ್ರಕರಣ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿ ಅವರ ಬೆಂಬಲಿಗರಿಂದ ಎರಡು ಪ್ರಕರಣ ದಾಖಲಾಗಿದೆ. ಮತ್ತೊಂದು ಪೊಲೀಸರಿಂದ ಸ್ವಯಂ ದೂರು ದಾಖಲಿಸಿಕೊಳ್ಳಲಾಗಿದೆ. ದಾಖಲಾದ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಬಳಿಕ ನಗರ ತೊರೆದವರ ಪತ್ತೆಗಾಗಿ ಪೊಲೀಸರು ತಂಡಗಳನ್ನು ರಚಿಸಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಇನ್ನು ಕಳುಹಿಸಿಕೊಡಲಾಗಿಲ್ಲ ಎಂದು ಗೊತ್ತಾಗಿದೆ. ಘಟನೆ ಬಳಿಕ 15 ದಿನಗಳ ಕಾಲವಕಾಶ ಇರುವುದರಿಂದ ಇನ್ನು ಸಾಕಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.