ಪ್ರಾರಂಭದಲ್ಲಿ 100 ಕ್ವಿಂಟಲ್ ಮಾದಲಿ ಮಾಡುವ ಮೂಲಕ ರಾಜ್ಯ ವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದರು
ಸೋಮರಡ್ಡಿ ಅಳವಂಡಿ ಕೊಪ್ಪಳ
ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹದಲ್ಲಿ ಎಲ್ಲವೂ ದಾಖಲೆಯೇ ಆಗುತ್ತಿದೆ. ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡುವ ಮಹಾದಾಸೋಹದಲ್ಲಿ ಪ್ರಸಕ್ತ ವರ್ಷ 25 ಟನ್ ಮಾದಲಿ ಸಿದ್ಧವಾಗುತ್ತಿದೆ.ಗವಿಸಿದ್ಧೇಶ್ವರ ಗೆಳೆಯರ ಬಳಗದವರು ಕಳೆದ 18 ವರ್ಷಗಳಿಂದ ಶ್ರೀಮಠದ ಜಾತ್ರೆಯ ಮಹಾದಾಸೋಹದಲ್ಲಿ ಸೇವೆ ಮಾಡುತ್ತಾ ಬಂದಿದ್ದಾರೆ. ಪ್ರಾರಂಭದಿಂದಲೂ ಮಾದಲಿ ಮಾಡಿ ದಾಸೋಹಕ್ಕೆ ಅರ್ಪಣೆ ಮಾಡುತ್ತಾರೆ. ಮೊದ ಮೊದಲು ಸಿಹಿತಿನಿಸು ಎಷ್ಟು ಬೇಕಾಗುತ್ತದೆ ಎನ್ನುವ ಅಂದಾಜು ಲೆಕ್ಕಾಚಾರದಲ್ಲಿ ಮಾದಲಿ ಸಿದ್ಧ ಮಾಡಿಕೊಡುವ ಮೂಲಕ ದಾಖಲೆ ಮಾಡುತ್ತಾ ಬಂದಿದ್ದಾರೆ.
ಪ್ರಾರಂಭದಲ್ಲಿ 100 ಕ್ವಿಂಟಲ್ ಮಾದಲಿ ಮಾಡುವ ಮೂಲಕ ರಾಜ್ಯ ವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದರು, ಕ್ರಮೇಣ ಅದರ ಪ್ರಮಾಣ ಹೆಚ್ಚು ಮಾಡುತ್ತಲೇ ಬಂದಿದ್ದು, ಈ ವರ್ಷ 25 ಟನ್ ಮಾದಲಿ ಮಾಡುತ್ತಿದ್ದಾರೆ.100 ಕ್ವಿಂಟಲ್ ಗೋಧಿ ಮತ್ತು 125 ಕ್ವಿಂಟಲ್ ಬೆಲ್ಲ, ಪುಟಾಣಿ, ಕೊಬ್ಬರಿ, ಗಸಗಸೆ ಸೇರಿದಂತೆ ಬೇಕಾಗುವ ಪದಾರ್ಥ ಹಾಕಿ ಸಿದ್ಧ ಮಾಡುತ್ತಾರೆ.
35 ಗ್ರಾಮಗಳ ಜನರು: ಪ್ರಾರಂಭದಲ್ಲಿ ಜೆಸಿಬಿ ಮೂಲಕ ಬೆಲ್ಲ ಅರೆದು ಮಾದಲಿ ಸಿದ್ಧ ಮಾಡುತ್ತಿದ್ದರು. ಈಗ ಅದನ್ನು ಬದಲಾಯಿಸಿ ಗ್ರಾಮಗಳಿಗೆ ಹಂಚಿಕೆ ಮಾಡುತ್ತಿದ್ದಾರೆ. ಈ ವರ್ಷ 35 ಗ್ರಾಮಗಳಿಗೆ ಹಂಚಿಕೆ ಮಾಡಿದ್ದಾರೆ. ಗ್ರಾಮಗಳಲ್ಲಿರುವ ಜನಸಂಖ್ಯೆಯ ಆಧಾರದಲ್ಲಿ 1 ಕ್ವಿಂಟಲ್ ನಿಂದ ಹಿಡಿದು 5, 10 ಕ್ವಿಂಟಲ್ ವರೆಗೆ ವಿತರಣೆ ಮಾಡಿದ್ದಾರೆ. ಬೆಲ್ಲ, ಗೋಧಿ ಹಿಟ್ಟು ಸೇರಿದಂತೆ ಅದಕ್ಕೆ ಬೇಕಾಗುವ ಪರಿಕರ ಹಂಚಿಕೆ ಮಾಡುತ್ತಾರೆ. ಗ್ರಾಮಗಳಲ್ಲಿ ಮನೆ ಮನೆಗೆ ಹಂಚಿಕೆ ಮಾಡಿ ಅವರು ಸಿದ್ಧ ಮಾಡಿಕೊಟ್ಟ ಮೇಲೆ ಸಂಗ್ರಹಿಸಿಕೊಂಡು ಬರಲಾಗುತ್ತದೆ. ಇದಕ್ಕೆ ವಾರಗಟ್ಟಲೇ ಸಮಯ ಬೇಕಾಗುತ್ತದೆ. ಹೀಗಾಗಿ, 35 ಹಳ್ಳಿಗಳಲ್ಲಿ ಗವಿಸಿದ್ಧೇಶ್ವರ ಜಾತ್ರೆಗೆ ಮಾದಲಿ ಮಾಡುವ ಮತ್ತೊಂದು ಜಾತ್ರೆಯೇ ನಡೆದಿದೆ.ದಾಖಲೆಯೇ ಸರಿ: ಜಾತ್ರೆ ಮತ್ತು ದಾಸೋಹವೊಂದರಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದಲಿ ಮಾಡುತ್ತಿರುವುದು ದಾಖಲೆಯೇ ಸರಿ. ನಾಡಿನ ಯಾವ ಮಠಗಳ ಪರಂಪರೆಯಲ್ಲಿಯೂ 25 ಟನ್ ಮಾದಲಿ ಮಾಡುವ ಉದಾಹರಣೆ ಇಲ್ಲ. ಇಷ್ಟಾದರೂ ಸಹ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ನಡೆಯುವ ಮಹಾ ದಾಸೋಹದಲ್ಲಿನ ಲಕ್ಷ ಲಕ್ಷ ಜನರು ಪ್ರಸಾದ ಸೇವನೆ ಮಾಡುವುದರಿಂದ ವಾರಕಾಲ ಮಾತ್ರ ಆಗುತ್ತದೆ. ಉಳಿದಂತೆ ಬೇರೆ ಬೇರೆ ಸಿಹಿ ಪದಾರ್ಥ ನೀಡಲಾಗುತ್ತದೆ.
ಕಳೆದ ಹದಿನೆಂಟು ವರ್ಷಗಳಿಂದ ಮಾದಲಿ ತಯಾರು ಮಾಡಿ ನೀಡುತ್ತಿದ್ದೇವೆ. ಪ್ರಾರಂಭದಲ್ಲಿ 100 ಕ್ವಿಂಟಲ್ ಮಾಡುತ್ತಿದ್ದನ್ನು ಹೆಚ್ಚಳ ಮಾಡುತ್ತಾ ಮಾಡುತ್ತಾ ಈಗ 25 ಟನ್‌ಗೆ ತಲುಪಿದೆ. ಈ ವರ್ಷ 35 ಗ್ರಾಮಗಳಲ್ಲಿ ಮಾದಲಿ ತಯಾರು ಮಾಡುವ ಕಾರ್ಯ ನಡೆದಿದೆ ಎಂದು ಗವಿಸಿದ್ಧೇಶ್ವರ ಗೆಳೆಯರ ಬಳಗದ ರಾಜು ಶೆಟ್ಟರ್ ತಿಳಿಸಿದ್ದಾರೆ.