- ಹೊಸಬರಿಗೆ ಸಂಪುಟದಲ್ಲಿ ಸ್ಥಾನ ಸಾಧ್ಯತೆ, ನನಗೂ ವಿಶ್ವಾಸ: ಚನ್ನಗಿರಿ ಶಾಸಕ - - -
ಕನ್ನಡಪ್ರಭ ವಾರ್ತೆ ದಾವಣಗೆರೆನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದ್ದು, ಒಂದುವೇಳೆ ಸಚಿವ ಸ್ಥಾನ ದೊರೆತರೆ ದಿವಂಗತ ಜೆ.ಎಚ್.ಪಟೇಲರ ನಂತರ ಅವಕಾಶವೇ ಸಿಗದ ಚನ್ನಗಿರಿ ಕ್ಷೇತ್ರದ 25 ವರ್ಷದ ಅಜ್ಞಾತವಾಸ ಅಂತ್ಯವಾಗುತ್ತದೆ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಮಂತ್ರಿ ಸ್ಥಾನ ಸಿಗುತ್ತದೆಂಬ ನಿರೀಕ್ಷೆ ಹೊಂದಿದ್ದೇನೆ. ಹೊಸದಾಗಿ ಆಯ್ಕೆಯಾದ ಶಾಸಕರಿಂದ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಮನವಿಯನ್ನೂ ಮಾಡಿದ್ದೇವೆ. ಹೈಕಮಾಂಡ್‌ಗೂ ಹೊಸಬರಿಗೆ ಸಚಿವ ಸ್ಥಾನ ನೀಡುವ ಆಲೋಚನೆ ಇದೆಯೆಂಬ ವಿಚಾರ ಮಾಧ್ಯಮಗಳಲ್ಲೂ ಗಮನಿಸಿದ್ದೇವೆ. ಕ್ರಿಯಾಶೀಲ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಅನುಕೂಲ ಎಂದರು.ಜಿಲ್ಲಾ ಕೋಟಾ, ಜಾತಿ ಕೋಟಾದಡಿ ನಾನೇನೂ ಸಚಿವ ಸ್ಥಾನವನ್ನು ಕೇಳಿಲ್ಲ. ನಾನು ರೈತ ಹೋರಾಟದಿಂದ ಬಂದವನು. ಹಾಗಾಗಿ, ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದೇನೆ. ದಿವಂಗತ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾದ ನಂತರ ಇಂದಿಗೂ ಚನ್ನಗಿರಿ ಕ್ಷೇತ್ರಕ್ಕೆ ಸಚಿವ ಸ್ಥಾನವೆಂಬುದೇ ಸಿಕ್ಕಿಲ್ಲ. ರಾಜಕೀಯ ಅಧಿಕಾರವು ಚನ್ನಗಿರಿ ಕ್ಷೇತ್ರಕ್ಕೆ ಅವಶ್ಯಕತೆ ಇದೆ. ನನ್ನ ಕ್ಷೇತ್ರಕ್ಕೆ ಈ ಸಲ ಮಂತ್ರಿ ಸ್ಥಾನ ಸಿಕ್ಕರೆ 25 ವರ್ಷದ ಅಜ್ಞಾತವಾಸಲೂ ಅಂತ್ಯವಾಗುತ್ತದೆ. ಯುವಕರಿಗೆ ಅವಕಾಶ ಸಿಕ್ಕರೆ ಖಂಡಿತಾ ತಮಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ವಿಪಕ್ಷಗಳ ವರ್ತನೆ ಇದೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಬಗ್ಗೆ ವಿಪಕ್ಷಗಳು ಟೀಕಿಸುವ ಮೂಲಕ ಇದೇ ರೀತಿ ವರ್ತಿಸುತ್ತಿವೆ. ಅಧಿಕಾರ ಹಸ್ತಾಂತರದ ವೇಳೆ ಏನಾದರೂ ಆಗುತ್ತದಾ ಅಂತಾ ಕಾಯುತ್ತಿದ್ದರು. ಅದೆಲ್ಲವೂ ಸುಸೂತ್ರವಾಗಿ ಆಯಿತು. ವಿಪಕ್ಷದವರಿಗೆ ಏನೂ ಸಿಗಲಿಲ್ಲ. ಏನಾದರೂ ತೆಗೆಯಬೇಕೆಂದು ಈಗ ಗ್ಯಾರಂಟಿ ಪರಿಷ್ಕರಣೆ ವಿಚಾರದಲ್ಲಿ ಆಕ್ಷೇಪ ಮಾಡುತ್ತಿದ್ದಾರಷ್ಟೇ ಎಂದು ಅವರು ಟೀಕಿಸಿದರು.
ಇಡೀ ವಿಶ್ವಕ್ಕೆ ಮಾದರಿಯಾದ ಸರ್ಕಾರ ಕರ್ನಾಟಕ ಸರ್ಕಾರವಾಗಿದೆ. ಎಲ್ಲ ಗ್ಯಾರಂಟಿಗಳನ್ನೂ ಕೊಟ್ಟು, ಭೂ ಗ್ಯಾರಂಟಿ, ವಿದ್ಯಾರ್ಥಿ ಬಸ್ಸು ಪಾಸ್ ಸೇರಿದಂತೆ ಹಲವಾರು ಯೋಜನೆಗಳನ್ನೂ ಕೊಟ್ಟಿದ್ದೇವೆ. ಗೃಹಲಕ್ಷ್ಮಿ ಯೋಜನೆಯ ಕೆಲ ಫಲಾನುಭವಿಗಳು ಸಾವನ್ನಪ್ಪಿದ್ದಾರೆ. ಕೆಲ ಕಾರಣಾಂತರದಿಂದ ಬೇರೆ ಬೇರೆ ಖಾತೆಗಳಿಗೆ ಹಣ ಹೋಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಹಣ ಸಿಗಬೇಕೆಂದು ರಿನೀವಲ್ ಬಗ್ಗೆ ಹೇಳಿದ್ದಾರಷ್ಟೇ ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಎಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಹೇಳಿಲ್ಲ. ತಾಯಂದಿರ ಆಶೀರ್ವಾದ ಕಳೆದುಕೊಳ್ಳುವುದಕ್ಕೆ ಯಾರೂ ಇಷ್ಟಪಡುವುದಿಲ್ಲ. ಮತ್ತೆ ಗ್ಯಾರಂಟಿ ಯೋಜನೆಗಳಿಂದಲೇ 2028ರ ಚುನಾವಣೆಯಲ್ಲೂ ನಮ್ಮ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಬಸವರಾಜ ಶಿವಗಂಗಾ ವಿಶ್ವಾಸ ವ್ಯಕ್ತಪಡಿಸಿದರು.- - -
(ಬಾಕ್ಸ್) * ರಮೇಶಣ್ಣನ ಹೇಳಿಕೆ ಬಗ್ಗೆ ಅವ್ರನ್ನೇ ಕೇಳಿ ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿದ್ದುದು ಒಳ್ಳೆಯದಾಯಿತೆಂದು ರಮೇಶಣ್ಣ (ರಮೇಶ ಜಾರಕಿಹೊಳಿ) ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದನ್ನು ಅವರನ್ನೇ ಕೇಳಬೇಕು. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೈಕಮಾಂಡ್ ತೀರ್ಮಾನ. ನಾಳೆ ನನ್ನನ್ನೇ ಹೈಕಮಾಂಡ್ ಅಧ್ಯಕ್ಷರಾಗಿ ಮಾಡಿದರೆ ಎಲ್ಲರೂ ಒಪ್ಪಬೇಕಾಗುತ್ತದೆ. ಬಿ.ಕೆ.ಹರಿಪ್ರಸಾದ, ಡಿ.ಕೆ.ಶಿವಕುಮಾರ ಜೊತೆಗೆ ಡಿಸಿಎಂ ಡಾ.ಜಿ.ಪರಮೇಶ್ವರ ಸಾಹೇಬರು ಸೇರಿದಂತೆ ಎಲ್ಲ ಸಮುದಾಯಕ್ಕೂ ನಮ್ಮ ಪಕ್ಷ, ಸರ್ಕಾರ ನ್ಯಾಯ ನೀಡುತ್ತಿದೆ.- ಬಸವರಾಜ ವಿ.ಶಿವಗಂಗಾ, ಚನ್ನಗಿರಿ ಕಾಂಗ್ರೆಸ್ ಶಾಸಕ.
- - -