ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿರುವುದು ಐತಿಹಾಸಿಕ ಸಾಧನೆ. ಅವರು ದೇಶದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಗುಜರಾತ್‌ನಿಂದ ಕೇಂದ್ರದ ವರೆಗೆ ಬಿಜೆಪಿಯನ್ನು ಮುನ್ನಡೆಸಿದ್ದು, ಇದೀಗ "ವಿಕಸಿತ ಭಾರತ " ನಿರ್ಮಾಣದ ಗುರಿಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ.
ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲೆ ವತಿಯಿಂದ ಬುಧವಾರ ನಗರದ ದಾಜಿಬಾನಪೇಟೆಯ ದುರ್ಗಾದೇವಿ ಕಲ್ಯಾಣ ಮಂಟಪದಿಂದ ಮೂರುಸಾವಿರ ಮಠದವರೆಗೆ "ಸೇವಾ ಜ್ಯೋತಿಯಾತ್ರೆ " ನಡೆಯಿತು.ಇದಕ್ಕೂ ಮುನ್ನ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನದ ಹಿನ್ನೆಲೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಅವರು ಮಾಡಿದ ಭಾಷಣವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಪಕ್ಷದ ಮುಖಂಡರು ವೀಕ್ಷಿಸಿದರು. ಬಳಿಕ ಸೇವಾ ಸಂಕಲ್ಪ ಪ್ರತಿಜ್ಞೆ ಬೋಧಿಸಲಾಯಿತು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿರುವುದು ಐತಿಹಾಸಿಕ ಸಾಧನೆ. ಅವರು ದೇಶದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಗುಜರಾತ್‌ನಿಂದ ಕೇಂದ್ರದ ವರೆಗೆ ಬಿಜೆಪಿಯನ್ನು ಮುನ್ನಡೆಸಿದ್ದು, ಇದೀಗ "ವಿಕಸಿತ ಭಾರತ " ನಿರ್ಮಾಣದ ಗುರಿಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.ರಸ್ತೆ, ಮೂಲಸೌಕರ್ಯ, ಲಾಜಿಸ್ಟಿಕ್ಸ್, ರಕ್ಷಣಾ ಉತ್ಪಾದನೆ, ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಪರಿವರ್ತನೆ ಕಾಣುತ್ತಿದೆ. ದೇಶ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಮೋದಿ ಅವರ ಕಾರ್ಯಶೈಲಿ ಮತ್ತು ನಿರಂತರ ಉತ್ಸಾಹ ಯುವಜನತೆಗೆ ಪ್ರೇರಣೆಯಾಗಿದ್ದು, ಪ್ರತಿಯೊಬ್ಬರೂ ದೇಶಸೇವೆಗೆ ಸಮರ್ಪಿತರಾಗಬೇಕು ಎಂದು ಕರೆ ನೀಡಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತ್ತಗಟ್ಟಿ, ಪಾಲಿಕೆ ಸಭಾನಾಯಕ ಶಿವು ಮೆಣಸಿನಕಾಯಿ, ಸದಸ್ಯರಾದ ರಾಜಣ್ಣ ಕೊರವಿ, ಜ್ಯೋತಿ ಪಾಟೀಲ, ಮುಖಂಡರಾದ ವೆಂಕಟೇಶ ಕಾಟವೆ, ಭಾಸ್ಕರ್ ಜಿತೂರಿ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಪ್ರಭು ನವಲಗುಂದಮಠ ಸೇರಿ ಹಲವರಿದ್ದರು.