ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಮುಂಡರಗಿ ತಾಲೂಕಿನ ಸುಮಾರು 2500 ಎಕರೆ ಭೂಮಿಯನ್ನು ಹೊರರಾಜ್ಯದ ಉದ್ಯಮಿಗಳು ದಾಳಿಂಬೆ ಬೆಳೆಯಲು ಗುತ್ತಿಗೆ (ಕಾಂಟ್ರ್ಯಾಕ್ಟ್ ಫಾರ್ಮಿಂಗ್) ಪಡೆದಿದ್ದಾರೆ.ಡಂಬಳ ಹೋಬಳಿಯ ಗ್ರಾಮಗಳು ಮಳೆಯಾಶ್ರಿತ ಮತ್ತು ಸಣ್ಣನೀರಾವರಿ ಆಶ್ರಿತ ಪ್ರದೇಶವಾಗಿರುವುದರ ಜತೆಗೆ ಫಲವತ್ತತೆಯ ಕೆಂಪು, ಕಪ್ಪುಮಣ್ಣಿನಿಂದ ಕೂಡಿದೆ. ತೋಟಗಾರಿಕೆ ಬೆಳೆಗೆ ಈ ಪ್ರದೇಶದಲ್ಲಿ ಉತ್ತಮ ವಾತಾವರಣವಿದೆ. ಕೊಳವೆ ಬಾವಿ ನೀರಿನಿಂದ ಹಲವಾರು ರೈತರು ಡ್ರ್ಯಾಗನ್ ಫ್ರುಟ್, ಮಾವು, ಅಡಕೆ, ಬಾಳೆ, ಟೊಮೇಟೊ, ಬದನೆಕಾಯಿ ಸೇರಿ ಹಲವು ಮಾದರಿಯ ಬೆಳೆ ಬೆಳೆದು ಜೀವನ ಕಟ್ಟಿಕೊಂಡಿದ್ದಾರೆ.
ಹಣದ ಆಮಿಷ: ಮಳೆ ಅಭಾವ, ಕೃಷಿ ಕೂಲಿ ಕಾರ್ಮಿಕರ ಕೊರತೆ, ಹಣದ ಕೊರತೆ ಇತ್ಯಾದಿ ಕಾರಣಗಳಿಂದ ಬೆಳೆ ಬೆಳೆಯಲು ಸಾಧ್ಯವಾಗದ ಅಸಹಾಯಕ ರೈತರು ಬೇರೆ ರಾಜ್ಯದ ಉದ್ಯಮಿಗಳಿಗೆ ತಮ್ಮ ಜಮೀನನ್ನು ಗುತ್ತಿಗೆ ನೀಡಿದ್ದಾರೆ. ಕೆಲವು ಶ್ರಮ ಪಡದ ಮೈಗಳ್ಳ ರೈತರೂ ಹಣದಾಸೆಗೆ ತಮ್ಮ ಜಮೀನನ್ನು ಗುತ್ತಿಗೆ ನೀಡಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ರೈತರ ಮನವೊಲಿಸುವಲ್ಲಿ ಚಾಣಾಕ್ಷರಾಗಿರುವ ಉದ್ಯಮಿಗಳು ದಾಳಿಂಬೆ ಬೆಳೆಯುವುದಕ್ಕೆ ಅಪಾರ ಪ್ರಮಾಣದ ಭೂಮಿಯನ್ನು ಗುತ್ತಿಗೆ ಪಡೆದುಕೊಂಡಿದ್ದಾರೆ. ಈ ಪ್ರಕ್ರೀಯೆ ಇನ್ನೂ ಮುಂದುವರೆದಿದೆ.ಸ್ಥಳಿಯ ರೈತರು ಎಕರೆಗೆ ₹5 ಸಾವಿರದಿಂದ ₹10 ಸಾವಿರದವರೆಗೆ ವಾರ್ಷಿಕ ಗುತ್ತಿಗೆ ಕೊಡುತ್ತಿದ್ದರು. ಆದರೆ ಬೇರೆ ರಾಜ್ಯದವರು ರೈತರ ಜಮೀನಿನಲ್ಲಿ ತಾವೇ ಕೊಳವೆಬಾವಿ ಕೊರೆಸಿ ಎಕರೆಗೆ ₹25 ರಿಂದ ₹30 ಸಾವಿರದ ವರೆಗೆ ಹಣ ನೀಡುವ ಆಮಿಷ ಒಡ್ಡದ್ದಾರೆ. ದಾಳಿಂಬೆ ಬೆಳೆಯುವುದಾಗಿಯೇ ಹೇಳುತ್ತಿದ್ದಾರೆ. ಇದಕ್ಕೆ ಒಪ್ಪಿ ರೈತರು ಜಮೀನಿನಲ್ಲಿ ದಾಳಿಂಬೆ ಬೆಳೆಯಲು ಭೂಮಿ ಬಿಟ್ಟು ಕೊಡುತ್ತಿದ್ದಾರೆ. ಈಗಾಗಲೇ ಮುಂಡರಗಿ ತಾಲೂಕಿನಾದ್ಯಂತ ನೂರಾರು ಹೆಕ್ಟೇರ್ ಜಮೀನಿನಲ್ಲಿ ದಾಳಿಂಬೆ ಬೆಳೆಯಲಾಗಿದೆ.
ಪೂರ್ವಜರಿಂದ ಹಿಡಿದು ತಮ್ಮ ಕುಟುಂಬಕ್ಕೆ ವಿವಿಧ ಧಾನ್ಯ, ಕಾಳುಕಡಿ, ದನಕರುಗಳಿಗೆ ಮೇವು ಬೆಳೆದು ಜೀವನಕ್ಕೆ ಆಶ್ರಯವಾಗಿದ್ದ ಫಲವತ್ತಾದ ಭೂಮಿಯನ್ನು ಬೇರೆ ರಾಜ್ಯದವರಿಗೆ ದಾಳಿಂಬೆ ಬೆಳೆಯಲು ಹಣದಾಸೆಗೆ 10 ವರ್ಷ, 20 ವರ್ಷ, 30 ವರ್ಷಗಳ ಗುತ್ತಿಗೆ ನೀಡುತ್ತಿದ್ದಾರೆ. ಕೆಲವರು ಖರೀದಿ ಕೊಟ್ಟಿದ್ದಾರೆ.
ಬೇರೆ ರಾಜ್ಯದ ಕೂಲಿ ಆಳು: ದಾಳಿಂಬೆ ಬೆಳೆ ಬೆಳೆಯಲು ರೈತರು ಭೂಮಿ ಬಿಟ್ಟು ಕೊಟ್ಟರಷ್ಟೇ ಸಾಕು. ಹೊರ ರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆತಂದು ಇಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಸ್ಥಳೀಯ ರೈತರಿಗೆ ದಾಳಿಂಬೆ ಬೆಳೆ ಬೆಳೆಯುವ ಜ್ಞಾನವಿಲ್ಲ. ಬೆಳೆಗಳಿಗೆ ಬರುವ ರೋಗದ ಬಗ್ಗೆ ಎಚ್ಚರ ವಹಿಸುವುದಿಲ್ಲ. ಕೀಟನಾಶಕಗಳನ್ನು ಸಿಂಪರಣೆ ಮಾಡುವ ಅರಿವಿರುವುದಿಲ್ಲವೆಂಬ ಕಾರಣಕ್ಕೆ ಹೊರರಾಜ್ಯದಿಂದಲೇ ಕೂಲಿಯಾಳುಗಳನ್ನು ಇಲ್ಲಿಗೆ ಕರೆತಂದು ಕೆಲಸ ಮಾಡಿಸುವುದಕ್ಕೆ ಆಸಕ್ತಿ ವಹಿಸಿದ್ದಾರೆ.
ಅಡ್ಡ ಪರಿಣಾಮ: ದಾಳಿಂಬೆ ಬೆಳೆಗಳಲ್ಲಿ ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ವ್ಯಾಪಕವಾಗಿ ರಾಸಾಯನಿಕ ಔಷಧಗಳನ್ನು ಸಿಂಪಡಿಸಲಾಗುತ್ತಿದೆ. ಆದರೆ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದು, ಭೂಗರ್ಭ ಜಲ ಮಾಲಿನ್ಯಗೊಳ್ಳುವುದು ಹಾಗೂ ಬೆಳೆಗಳ ಪರಾಗಸ್ಪರ್ಶ ಮಾಡುವ ಜೇನುನೊಣಗಳಂತಹ ಉಪಯುಕ್ತ ಕೀಟಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಬಳಕೆಯನ್ನು ನಿಯಂತ್ರಿತವಾಗಿ ನಡೆಸಬೇಕು ಎಂದು ಕೃಷಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.ಖೇದಕರ: ಡಂಬಳ ಹೋಬಳಿಯಾದ್ಯಂತ ಹಲವು ಕೆರೆಗಳಿವೆ. ಕೆಲವೆಡೆ ಬೋರವೆಲ್‌ಗಳೂ ಇದ್ದು, ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿದ್ದು, ಇದರಿಂದ ನೀರಿನ ಕೊರತೆ ಇಲ್ಲ. ಹಣದ ಆಸೆಗೆ ರೈತರು ಬೇರೆ ರಾಜ್ಯದಿಂದ ಬಂದು ದಾಳಿಂಬೆ ಬೆಳೆಯುವ ಉದ್ಯಮಿಗಳಿಗೆ ಫಲವತ್ತಾದ ಭೂಮಿ ಕೊಡುತ್ತಿರುವುದು ಖೇದಕರ ಎಂದು ಡಂಬಳ ಗ್ರಾಮದ ರೈತರಾದ ಮಂಜುನಾಥ ಬಿಸನಳ್ಳಿ, ರಾಜಪ್ಪ ಯಪ್ಪೇರಿ, ವೆಂಕಟೇಶ ತಳವಾರ ತಿಳಿಸಿದರು.