ಕುಕ್ಕೆ ಸುಬ್ರಹ್ಮಣ್ಯದಲ್ಲಿ 2500 ಆಶ್ಲೇಷ ಬಲಿ ಸೇವೆ

| Published : Jun 12 2024, 12:40 AM IST

ಸಾರಾಂಶ

ಶುದ್ಧ ಷಷ್ಠಿಯ ದಿನವಾದ ಜೂ. 12ರಂದು ಶ್ರೀ ದೇವರು ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ಸ್ವೀಕರಿಸಿದ ಬಳಿಕ ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಕೊನೆಯಾಗಲಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಶ್ಲೇಷ ನಕ್ಷತ್ರದ ಪುಣ್ಯ ದಿನವಾದ ಮಂಗಳವಾರ ಭಕ್ತ ಸಾಗರವೇ ಹರಿದು ಬಂದಿತ್ತು.

ಕುಕ್ಕೆ ಸುಬ್ರಹ್ಮಣ್ಯನಿಗೆ ಪ್ರಿಯವಾದ ಮಂಗಳವಾರ ಆಶ್ಲೇಷ ನಕ್ಷತ್ರ ಬಂದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಸುಮಾರು 2500 ಭಕ್ತರು ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಅಲ್ಲದೆ 425 ನಾಗಪ್ರತಿಷ್ಠೆ ಸೇವೆ ನೆರವೇರಿತು. ಪ್ರತಿದಿನದಂತೆ 191 ಸರ್ಪ ಸಂಸ್ಕಾರ ಸೇವೆ ಆರಂಭಗೊಂಡಿತು.ಪ್ರಮುಖ ಸೇವೆಗಳಾದ ಪಂಚಾಮೃತ ಮಹಾಭಿಷೇಕ, ತುಲಾಭಾರ, ಮಹಾಪೂಜೆ, ಕಾರ್ತಿಕ ಪೂಜೆ, ಶೇಷಸೇವೆಯನ್ನು ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು. ಶ್ರೀ ದೇವಳದ ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯ ಮೊದಲಾದೆಡೆ ಭಕ್ತ ಸಾಗರವೇ ಕಂಡು ಬಂದಿತ್ತು. ಸಹಸ್ರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀ ದೇವರ ದರುಶನ ಪಡೆದರು. ಭಕ್ತರೊಂದಿಗೆ ಭಕ್ತರನ್ನು ಕರೆದುಕೊಂಡು ಬಂದ ವಾಹನಗಳ ಸಂಖ್ಯೆಯೂ ಅಧಿಕವಿದ್ದ ಕಾರಣ ಪಾರ್ಕಿಂಗ್ ಸ್ಥಳಗಳು ತುಂಬಿದ್ದವು. ಸವಾರಿ ಮಂಟಪ, ಅಕ್ಷರ ವಸತಿ ಗೃಹದ ಸಮೀಪ, ಆಂಜನೇಯ ಗುಡಿ ಸಮೀಪ ಮೊದಲಾದ ಕಡೆಯ ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ತುಂಬಿ ತುಳುಕಿತ್ತು.ಇಂದು ನಿತ್ಯೋತ್ಸವ ತೆರೆ: ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀದೇವರ ಹೊರಾಂಗಣ ಉತ್ಸವಾದಿಗಳು ಬುಧವಾರ ತೆರೆ ಕಾಣಲಿದೆ. ಶುದ್ಧ ಷಷ್ಠಿಯ ದಿನವಾದ ಜೂ. 12ರಂದು ಶ್ರೀ ದೇವರು ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ಸ್ವೀಕರಿಸಿದ ಬಳಿಕ ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಕೊನೆಯಾಗಲಿದೆ.