25 ಲಕ್ಷ ಜನರಿಂದ 2500 ಕಿ.ಮೀ. ಮಾನವ ಸರಪಳಿ : ಕರ್ನಾಟಕ ಸರ್ಕಾರದ ಐತಿಹಾಸಿಕ ಕಾರ್ಯಕ್ರಮ

| Published : Sep 15 2024, 01:57 AM IST / Updated: Sep 15 2024, 12:16 PM IST

25 ಲಕ್ಷ ಜನರಿಂದ 2500 ಕಿ.ಮೀ. ಮಾನವ ಸರಪಳಿ : ಕರ್ನಾಟಕ ಸರ್ಕಾರದ ಐತಿಹಾಸಿಕ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದು, ಬೀದರನ ಬಸವ ಕಲ್ಯಾಣದಿಂದ ಚಾಮರಾಜನಗರದವರೆಗೆ ಸುಮಾರು 25 ಲಕ್ಷ ಜನರಿಂದ 2500 ಕಿ.ಮೀ. ಮಾನವ ಸರಪರಳಿ ನಿರ್ಮಿಸುವ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ.

  ಶಿರಾ :  ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದು, ಬೀದರನ ಬಸವ ಕಲ್ಯಾಣದಿಂದ ಚಾಮರಾಜನಗರದವರೆಗೆ ಸುಮಾರು 25 ಲಕ್ಷ ಜನರಿಂದ 2500 ಕಿ.ಮೀ. ಮಾನವ ಸರಪರಳಿ ನಿರ್ಮಿಸುವ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಎಲ್ಲರೂ ಕೈಜೋಡಿಸಿ ಎಂದು ಪೌರಾಯುಕ್ತ ರುದ್ರೇಶ್.ಕೆ. ಮನವಿ ಮಾಡಿದರು. ಅವರು ಶನಿವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಗೆ ಸಂಬಂಧಿಸಿದಂತೆ ನಗರದ ಖಾಸಗಿ ಹೋಟೆಲ್ ಬಳಿ ಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿದರು. 

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸುವುದೇ ಮೂಲ ಉದ್ದೇಶವಾಗಿದೆ. ಸೆ. 15ರ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು, ಶಿರಾ ನಗರಸಭಾ ವ್ಯಾಪ್ತಿಯಲ್ಲಿ ನಗರದ ಪಾಕಶಾಲಾ ಹೊಟೇಲ್ಲಿನಿಂದ ಪ್ರಾರಂಭವಾಗಿ ನಗರದ ಮೂಲಕ ಸಾಗಿ ಕಾಮತ್ ಹೊಟೇಲ್‌ ವರೆಗೆ ಮಾನವ ಸರಪಳಿ ನಿರ್ಮಾಣ ಮಾಡಲಾಗಿದೆ. ಶಿರಾ ನಗರದಲ್ಲಿ ಒಟ್ಟು 6000 ಜನರಿಂದ ಮಾನವ ಸರಪಳಿ ನಿರ್ಮಾಣ ಗುರಿ ಹೊಂದಲಾಗಿದೆ ಎಂದರು. 

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೆ.ಬಡಿಗೇರ ಅವರು ಮಾತನಾಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸುವಂತಹ ಐತಿಹಾಸಿಕ ದಿನ ಸೆ.15 ಆಗಲಿದ್ದು, ಪ್ರಜಾಪ್ರಭುತ್ವ ದಿನ ಆಚರಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮಾನವ ಸರಪಳಿ ನಿರ್ಮಾಣ ಮಾಡಿ ವಿಶ್ವ ದಾಖಲೆ ಮಾಡಿ ನಮ್ಮ ದೇಶದ ಪ್ರಜಾಪ್ರಭುತ್ವವದ ಒಗ್ಗಟ್ಟನ್ನು ಜಗತ್ತಿಗೆ ತೋರಿಸುವ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಈ ಸಂದರ್ಭದಲ್ಲಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ, ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಧನಶಂಕರ್, ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್, ಎಇಇ ಕೆಂಚಪ್ಪ, ಸಿನಿಯರ್ ಪ್ರೋಗ್ರಾಮರ್ ಚಿದಾನಂದ್, ಆರೋಗ್ಯ ನಿರೀಕ್ಷಕ ಜಗನ್ನಾಥ್, ಸಹಾಯಕ ಎಂಜಿನಿಯರ್‌ ಗಳಾದ ಕುಮಾರ್, ಮಾರುತಿ, ಶಾರದಾ ಸೇರಿದಂತೆ ಹಲವರು ಹಾಜರಿದ್ದರು.