ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಸಿದ್ಧಾರೂಢರ ಜಾತ್ರೆ ಎಂದರೆ ಅಲ್ಲಿ ವಿಶೇಷ, ವೈಶಿಷ್ಟ್ಯ ಇರಲೇ ಬೇಕು. ಅಜ್ಜನ ಜಾತ್ರೆಗೆ ಲಕ್ಷಾಂತರ ಭಕ್ತ ಸಮೂಹ ಸೇರುವುದು ಸರ್ವೇ ಸಾಮಾನ್ಯ. ಆದರೆ, ಪಣಜಿಯಿಂದ ಯುವಕರ ತಂಡವೊಂದು ಸುಮಾರು 190 ಕಿಮೀ ಪಾದಯಾತ್ರೆಯ ಮೂಲಕ ಅಜ್ಜನ ಸನ್ನಿಧಿಗೆ ಆಗಮಿಸಿ ಭಕ್ತಿ ಸಮರ್ಪಿಸಿದೆ. ಹೀಗೆ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ವಿವಿಧೆಡೆಯಿಂದ ಪಾದಯಾತ್ರೆ ಮೂಲಕ ಮಠ ತಲುಪಿದ್ದಾರೆ.ತಲೆಯ ಮೇಲೆ ಟೋಪಿ, ಕೊರಳಲ್ಲಿ ಕೇಸರಿ ಶಾಲು, ಕೈಯಲ್ಲಿ ತಾಳ ಹಿಡಿದು ಶಿವನಾಮಸ್ಮರಣೆ, ಸಿದ್ಧಾರೂಢರ ಸ್ಮರಣೆ ಮಾಡುತ್ತ ರಸ್ತೆಯ ಪಕ್ಕದಲ್ಲಿ ತಂಡೋಪ ತಂಡವಾಗಿ ಪಾದಯಾತ್ರೆ ಮಾಡುತ್ತ ಸಿದ್ಧಾರೂಢರ ಮಠದ ಕಡೆ ಹೆಜ್ಜೆ ಹಾಕುತ್ತಿರುವುದು ಬುಧವಾರ ಕಂಡುಬಂದ ಸಾಮಾನ್ಯ ದೃಶ್ಯ.
ಕಳೆದ 25-30 ವರ್ಷಗಳಿಂದ ಸಿದ್ಧಾರೂಢರ ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೂರಾರು ಕಿಮೀಗಳ ಮೂಲಕ ಪಾದಯಾತ್ರೆ ಕೈಗೊಳ್ಳುತ್ತ ಬಂದಿದ್ದಾರೆ. ಮೊದಮೊದಲು ಐದುನೂರು, ಸಾವಿರವಿದ್ದ ಪಾದಯಾತ್ರೆಯ ಸಂಖ್ಯೆ ಈಗ 25 ಸಾವಿರಕ್ಕೂ ಹೆಚ್ಚು ದಾಟಿದೆ. ಪ್ರತಿವರ್ಷವೂ ಈ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.ಎಲ್ಲಿಂದ ಬರುತ್ತಾರೆ?
ಗೋವಾ, ಮಹಾರಾಷ್ಟ್ರ, ಆಂಧ್ರ ಹಾಗೂ ರಾಜ್ಯದ ಕಲಬುರಗಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ಹಲವು ಭಾಗಗಳಿಂದ ಶ್ರೀ ಸಿದ್ಧಾರೂಢರ ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು ಪ್ರತಿವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವುದು ಆರೂಢರ ಮೇಲಿನ ಭಕ್ತಿ ತೋರಿಸುತ್ತದೆ.16 ವರ್ಷಗಳಿಂದ
ಬಾಗಲಕೋಟೆ ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನ ಸಂಗಾನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ 500ಕ್ಕೂ ಅಧಿಕ ಜನರು ಕಳೆದ 16 ವರ್ಷಗಳಿಂದ ಪಾದಯಾತ್ರೆಯ ಮೂಲಕ ಅಜ್ಜನ ಮಠಕ್ಕೆ ಬಂದು ಸೇವೆ ಮಾಡುತ್ತಾರೆ. ಸಂಗಾನಹಟ್ಟಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಕ್ಕೂ ಅಧಿಕ ಭಕ್ತರು ಮಹಾಲಿಂಗಪುರದಲ್ಲಿರುವ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಿಂದ ಪಾದಯಾತ್ರೆ ಕೈಗೊಳ್ಳುತ್ತಾರೆ.27ನೇ ವರ್ಷದ ಯಾತ್ರೆ
ಕಲಬುರಗಿ ಜಿಲ್ಲೆಯ ಆಳಂದದ ಸದ್ಗುರು ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ ಭಕ್ತ ಮಂಡಳಿಯಿಂದ ಕಳೆದ 27 ವರ್ಷಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಫೆ. 13ರಂದು ಆಳಂದ ಪಟ್ಟಣದ ಶಿವಶರಣ ಮಂಟಪದಿಂದ ಆರಂಭಿಸಿದ್ದ ಪಾದಯಾತ್ರೆಯು ಬುಧವಾರ ಬೆಳಗ್ಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠಕ್ಕೆ ಬಂದು ತಲುಪಿತು. 20 ಸಾವಿರ ರೊಟ್ಟಿಬರೀ ಪಾದಯಾತ್ರೆ ಕೈಗೊಳ್ಳದೇ ಸಿದ್ಧಾರೂಢರ ಮಠಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಗ್ರಾಮದಿಂದಲೇ 20 ಸಾವಿರಕ್ಕೂ ಅಧಿಕ ರೊಟ್ಟಿಗಳನ್ನು ಭಕ್ತರು ತಾವೇ ತಯಾರಿಸಿಕೊಂಡು ತಂದು ಶ್ರೀಮಠದ ಪಾಠಶಾಲೆಯಲ್ಲಿ ಭಕ್ತರಿಗೆ ರೊಟ್ಟಿ, ಅನ್ನ, ಸಾಂಬಾರಿನ ಊಟ ಬಡಿಸುವರು. ಇದರೊಂದಿಗೆ ಜಾತ್ರೆಯ ಪೂರ್ವದಿನದ ಏಕಾದಶಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾವಿರಕ್ಕೂ ಅಧಿಕ ಭಕ್ತರಿಗೆ ಶೇಂಗಾ ಹಾಗೂ ಬೆಲ್ಲದ ಪ್ಯಾಕೆಟ್ ವಿತರಿಸುವುದು ಮತ್ತೊಂದು ವಿಶೇಷ. 8-10 ವರ್ಷದಿಂದ ಪಾದಯಾತ್ರೆ
25-30 ಸ್ನೇಹಿತರು ಸೇರಿಕೊಂಡು ಕಳೆದ 8-10 ವರ್ಷಗಳಿಂದ ಪಣಜಿಯಿಂದ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ. ಮೊದಲು ನಾನು ಒಬ್ಬನೇ ಆಗಮಿಸುತ್ತಿದ್ದೆ. ಕಳೆದ 4-5 ವರ್ಷಗಳಿಂದ ನನ್ನ 25-30 ಸ್ನೇಹಿತರು ನನ್ನ ಜತೆ ಕೈಜೋಡಿಸಿದ್ದಾರೆ.- ಮನೋಹರ ಎಸ್. ಪಣಜಿಯಿಂದ ಆಗಮಿಸಿದ ಯುವಕಸಂಖ್ಯೆ ಹೆಚ್ಚಳ
ಕಳೆದ 18 ವರ್ಷಗಳಿಂದ ಪಾದಯಾತ್ರೆ ಮೂಲಕ ಸಿದ್ಧಾರೂಢರ ಮಠಕ್ಕೆ ಬರುತ್ತಿದ್ದೇನೆ. ನಮ್ಮೊಂದಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂಖ್ಯೆ ವರ್ಷಕ್ಕಿಂತ ವರ್ಷಕ್ಕೆ ಹೆಚ್ಚಾಗುತ್ತಿದೆ.- ಲಕ್ಷ್ಮಣ ದಡ್ಡಿ, ಬಾಗಲಕೋಟೆ ಜಿಲ್ಲೆ ಸಂಗಾಪುರದಿಂದ ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತಕುಟುಂಬ ಸಮೇತ ಪಾದಯಾತ್ರೆ
10 ವರ್ಷಗಳಿಂದ ಕುಟುಂಬ ಸಮೇತರಾಗಿ ಪಾದಯಾತ್ರೆ ಮೂಲಕ ಅಜ್ಜನ ಮಠಕ್ಕೆ ಬರುತ್ತಿದ್ದೇನೆ. ಇಲ್ಲಿಗೆ ಬಂದ ನಂತರ ನಮ್ಮ ಎಲ್ಲ ಸಂಕಷ್ಟಗಳು ಪರಿಹಾರವಾಗಿವೆ. ನನ್ನ ಆಯುಷ್ಯವಿರುವ ತನಕ ಪಾದಯಾತ್ರೆಯ ಮೂಲಕ ಅಜ್ಜನ ಮಠಕ್ಕೆ ಬರುತ್ತೇನೆ.- ಮಹದೇವ ನಂದ್ಯಾಳ, ಆಳಂದದಿಂದ ಆಗಮಿಸಿದ್ದ ಭಕ್ತ