ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
2018-19ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆ ಕಳೆದುಕೊಂಡ 252 ಸಂತ್ರಸ್ತ ಕುಟುಂಬಗಳಿಗೆ ‘ಮನೆ ಹಂಚಿಕೆ’ ಕಾರ್ಯವು ನಗರದ ಜಿ.ಪಂ.ಸಭಾಂಗಣದಲ್ಲಿ ಬುಧವಾರ ನಡೆಯಿತು.ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇನ್ಫೋಸಿಸ್ ಸಂಸ್ಥೆಯ ಸುನಿಲ್ ಕುಮಾರ್, ಸಂತೋಷ್ ಹಾಗೂ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರ ಉಪಸ್ಥಿತಿಯಲ್ಲಿ ಲಾಟರಿ ಮೂಲಕ ‘ಮನೆ ಹಂಚಿಕೆ’ ಕಾರ್ಯವು ಪಾರದರ್ಶಕವಾಗಿ ನಡೆಯಿತು.
‘ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಇನ್ಫೋಸಿಸ್ ಸಂಸ್ಥೆ ವತಿಯಿಂದ ನಿರ್ಮಾಣವಾಗಿರುವ 200 ಮನೆಗಳು ಸೇರಿದಂತೆ ಜಂಬೂರಿನಲ್ಲಿ ಇಂಡಿಯನ್ ಹ್ಯಾಬಿಟೇಟ್ ಸಂಸ್ಥೆಯಿಂದ ನಿರ್ಮಾಣವಾಗಿರುವ 4 ಮನೆಗಳು, ಜೊತೆಗೆ ಮದೆನಾಡು ಬಳಿ 4, ಕೆ.ನಿಡುಗಣೆ ಬಳಿ 2, ಗಾಳಿಬೀಡು ಬಳಿ 42 ಸೇರಿದಂತೆ ಒಟ್ಟು 252 ಮನೆಗಳ ಹಂಚಿಕೆ ಕಾರ್ಯವು ಸಂತ್ರಸ್ತರ ಸಮ್ಮುಖದಲ್ಲಿ ಮನೆ ಹಂಚಿಕೆ ನಡೆಯಿತು. ಲಾಟರಿ ತೆಗೆಯುವ ಮೂಲಕ ಸಂತ್ರಸ್ತರೇ ತಮ್ಮ ಮನೆ ಸಂಖ್ಯೆ ಆಯ್ಕೆ ಮಾಡಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು 2018-19 ರಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿದ್ದ ಬಾಕಿ ಕುಟುಂಬದವರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ. ಇನ್ಫೋಸಿಸ್ ಸಂಸ್ಥೆಯಿಂದ 200 ಮನೆಗಳು ಸೇರಿದಂತೆ ಹ್ಯಾಬಿಟೇಟ್ ಸಂಸ್ಥೆಯಿಂದ ವಿವಿಧ ಕಡೆಗಳಲ್ಲಿ ನಿರ್ಮಿಸಿರುವ 52 ಮನೆಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮನೆ ಹಂಚಿಕೆ ಸಂಬಂಧ ಈಗಾಗಲೇ ಆಕ್ಷೇಪಣೆಗೂ ಸಹ ಅವಕಾಶ ಕಲ್ಪಿಸಲಾಗಿತ್ತು. ಆಕ್ಷೇಪಣೆ ಸಂಬಂಧ ಎಲ್ಲಾ ರೀತಿ ಪರಿಶೀಲಿಸಿ ಬಾಕಿ ಇರುವ ಸಂತ್ರಸ್ತ ಕುಟುಂಬಗಳಿಗೆ ಪಾರದರ್ಶಕವಾಗಿ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.‘ಈಗಾಗಲೇ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗಿದ್ದು, ಮನೆ ಹಕ್ಕುಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಂದ ಶೀಘ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.’
ಇನ್ಫೋಸಿಸ್ ಸಂಸ್ಥೆಯ ಪ್ರಮುಖರಾದ ಸುನಿಲ್ ಕುಮಾರ್ ಅವರು ಮಾತನಾಡಿ 2018 ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಹಲವು ಕುಟುಂಬಗಳು ಮನೆ ಕಳೆದುಕೊಂಡರು. ಈ ಹಿನ್ನೆಲೆ ಇನ್ಫೋಸಿಸ್ ಸಂಸ್ಥೆಯು ಸಾಧ್ಯವಾದಷ್ಟು ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ಜಂಬೂರಿನಲ್ಲಿ 200 ಮನೆಗಳನ್ನು ನಿರ್ಮಿಸಲು ಮುಂದಾಯಿತು. ಆ ನಿಟ್ಟಿನಲ್ಲಿ 34 ಕೋಟಿ ರು. ವೆಚ್ಚದಲ್ಲಿ 200 ಮನೆಗಳನ್ನು ನಿರ್ಮಿಸಲಾಗಿದೆ ಎಂದರು.ಎರಡು ಬೆಡ್‌ರೂಮ್ ಒಳಗೊಂಡ ಲೈಟಿಂಗ್ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಮನೆ ಒಳಗೊಂಡಿದೆ. ಸರ್ಕಾರ ಹಾಗೂ ಜಿಲ್ಲಾಡಳಿತದ ನಿರಂತರ ಪರಿಶ್ರಮದಿಂದ ಈ ಕಾರ್ಯ ಆಗಿದೆ ಎಂದು ಅವರು ನುಡಿದರು.
ಇನ್ಫೋಸಿಸ್ ಸಂಸ್ಥೆಯ ಮತ್ತೊಬ್ಬ ಪ್ರತಿನಿಧಿ ಸಂತೋಷ್ ಅವರು ಮಾತನಾಡಿ ಪ್ರತಿಯೊಬ್ಬರ ಬದುಕಿನಲ್ಲಿ ವಸತಿ ಅವಶ್ಯಕ. ಆ ನಿಟ್ಟಿನಲ್ಲಿ ಸಂತ್ರಸ್ತರ ನೆಮ್ಮದಿಗೆ ಇನ್ಫೋಸಿಸ್ ಸಂಸ್ಥೆ ಸರ್ಕಾರದ ಜೊತೆ ಕೈಜೋಡಿಸಿದೆ. ಪ್ರತಿಯೊಬ್ಬರಿಗೂ ನೆಮ್ಮದಿಯ ಬದುಕು ಅತ್ಯಗತ್ಯ ಎಂದು ಹೇಳಿದರು.ಉಪ ವಿಭಾಗಾಧಿಕಾರಿ ಹಾಗೂ ಮನೆ ಹಂಚಿಕೆ ನೋಡಲ್ ಅಧಿಕಾರಿ ವಿನಾಯಕ ನರ್ವಾಡೆ ಅವರು ಮಾತನಾಡಿ ಸಂತ್ರಸ್ತರು ಮೊದಲ ಆದ್ಯತೆಯಲ್ಲಿ ಗಾಳಿಬೀಡು, ಎರಡನೇ ಆದ್ಯತೆಯಲ್ಲಿ ಜಂಬೂರು ಆಯ್ಕೆ ಮಾಡಿದ್ದರು. ಇನ್ಫೋಸಿಸ್ ಸಂಸ್ಥೆಯ 200 ಮನೆಗಳು ಜೊತೆಗೆ ವಿವಿಧ ಪ್ರದೇಶದ 52 ಮನೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಬಿಳಿಗೇರಿಯಲ್ಲಿ 22, ಕರ್ಣಂಗೇರಿಯಲ್ಲಿ 35, ಮದೆನಾಡು ಬಳಿ 76, ಕೆ.ನಿಡುಗಣೆ ಬಳಿ 74, ಜಂಬೂರಿನಲ್ಲಿ 379 ಮನೆಗಳು ಸೇರಿದಂತೆ ಒಟ್ಟು 586 ಮನೆಗಳು ಹಂಚಿಕೆಯಾಗಿತ್ತು.ಬುಧವಾರ ಮನೆ ಹಂಚಿಕೆ ಮಾಡಲಾದ 252 ಮನೆಗಳು ಸೇರಿದಂತೆ ಒಟ್ಟು 838 ಮನೆಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಿದಂತಾಗಿದೆ.