ಹೊಸಕೋಟೆ: ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಶುದ್ಧೀಕರಿಸುವ ಉದ್ದೇಶದಿಂದ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಾಲೂಕು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ತಿಳಿಸಿದರು

ಹೊಸಕೋಟೆ: ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಶುದ್ಧೀಕರಿಸುವ ಉದ್ದೇಶದಿಂದ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಾಲೂಕು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಬಿಎಲ್‌ಒಗಳಿಗೆ ವಿತರಿಸಲಾಗಿದೆ. ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಕ್ಷೇತ್ರದಲ್ಲಿ 2,46,156 ಇದ್ದ ಮತದಾರರ ಸಂಖ್ಯೆ ಸುಮಾರು 25,950 ಮತದಾರರು ಡಿಲೀಟ್ ಆಗಿ 2,20,206 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ.

ಕ್ಷೇತ್ರದಲ್ಲಿ ವಾಸವಿಲ್ಲದವರು, ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು, ಉದ್ಯೋಗ ನಿಮಿತ್ತ ಬೇರೆ ರಾಜ್ಯಗಳಿಂದ ಬಂದು ಮತ್ತೆ ಸ್ವಂತ ಊರುಗಳಿಗೆ ಮರಳಿರುವವರ ಹೆಸರು ಪರಿಶೀಲಿಸಿ ದೃಢೀಕರಿಸಲಾಗಿದೆ ಎಂದು ವಿವರಿಸಿದರು.

ಅಂತಿಮ ಪಟ್ಟಿಯಲ್ಲಿ 2.20 ಲಕ್ಷ ಮತದಾರರು:

ಕ್ಷೇತ್ರದಲ್ಲಿ ಮ್ಯಾಪಿಂಗ್, ಕರಡು ಮತದಾರರ ಪಟ್ಟಿ ಪ್ರಕಟಣೆ, ದಾಖಲೆಗಳ ಪರಿಶೀಲನೆ, ಲಾಜಿಕಲ್ ವ್ಯತ್ಯಾಸಗಳು ಹಾಗೂ ಮ್ಯಾಪಿಂಗ್ ಆಗದ ಪ್ರಕರಣಗಳ ಪರಿಶೀಲನೆ ಸೇರಿದಂತೆ ವಿವಿಧ ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಹೊಸ ಮತದಾರರ ಸೇರ್ಪಡೆ, ಹೆಸರುಗಳ ತಿದ್ದುಪಡಿ ಮತ್ತು ತೆಗೆದುಹಾಕುವಿಕೆಗಾಗಿ ನಿಗದಿಪಡಿಸಿರುವ ನಮೂನೆಗಳ ಮೂಲಕ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 2,20,206 ಮತದಾರರು ಉಳಿದಿದ್ದಾರೆ. ಪುರುಷರು: 1,08,430, ಮಹಿಳೆಯರು: 1,11,757, ತೃತೀಯ ಲಿಂಗದವರು: 4, ಸಾಮಾನ್ಯ ಮತದಾರರ ಒಟ್ಟು: 2,20,191, ಇದರೊಂದಿಗೆ 15 ಸೇವಾ ಮತದಾರರನ್ನು ಸೇರಿಸಿ ಒಟ್ಟು 2,20,206 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ತಿಳಿಸಿದರು.

85 ವರ್ಷ ಮೇಲ್ಪಟ್ಟ ಮತದಾರರು: ಕ್ಷೇತ್ರದಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 2,187 ಮತದಾರರಿದ್ದಾರೆ. ಇವರಲ್ಲಿ 1,043 ಪುರುಷರು ಹಾಗೂ 1,144 ಮಹಿಳೆಯರು ಇದ್ದಾರೆ.

ವಿಶೇಷ ಚೇತನ ಮತದಾರರು:

ಕ್ಷೇತ್ರದಲ್ಲಿ ವಿಶೇಷ ಚೇತನ ಮತದಾರರ ಸಂಖ್ಯೆಯೂ ಗಮನಾರ್ಹವಾಗಿದೆ. ಒಟ್ಟು 3,338 ವಿಶೇಷ ಚೇತನ ಮತದಾರರಿದ್ದು, ಇವರಲ್ಲಿ 1,834 ಪುರುಷರು ಹಾಗೂ 1,504 ಮಹಿಳೆಯರು ಇದ್ದಾರೆ.

298 ಮತಗಟ್ಟೆಗಳ ಸ್ಥಾಪನೆ:

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 298 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 51 ಹಾಗೂ ಗ್ರಾಮೀಣ ಪ್ರದೇಶದಲ್ಲಿ 247 ಮತಗಟ್ಟೆಗಳಿವೆ ಎಂದು ತಿಳಿಸಿದರು.

ಈ ವೇಳೆ ತಾಪಂ ಇಒ ಮುನಿಯಪ್ಪ, ವ್ಯವಸ್ಥಾಪಕ ಬಸವರಾಜ್ ಹಾಜರಿದ್ದರು.

ಬಾಕ್ಸ್................

ಅರ್ಹ ಮತದಾರರು ಆತಂಕಪಡುವ ಅಗತ್ಯವಿಲ್ಲ

ಯಾವುದೇ ಅರ್ಹ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಸಂಬಂಧಪಟ್ಟ ದಾಖಲೆ ಹಾಗೂ ವಯಸ್ಸಿನ ಪುರಾವೆಯನ್ನು ಸಲ್ಲಿಸಿ ನಮೂನೆ-6ರ ಮೂಲಕ ಅರ್ಜಿ ಸಲ್ಲಿಸಿದರೆ, ನಿಯಮಾನುಸಾರ ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಮತದಾರರ ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ತಿಳಿಸಿದರು.

ಫೋಟೋ: 27 ಹೆಚ್‌ಎಸ್‌ಕೆ 1

ಹೊಸಕೋಟೆ ತಾಪಂ ಆವರಣದಲ್ಲಿ ಮತದಾರರ ನೋಂದಣಾಧಿಕಾರಿ ಶಿವಕುಮಾರ್ ವಿವಿಧ ಪಕ್ಷಗಳ ಬಿಎಲ್‌ಎ ಗಳಿಗೆ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯನ್ನು ವಿತರಿಸಿದರು.