೨೬ ಕಿ.ಮೀ. ಸರ್ವೀಸ್ ರಸ್ತೆ ತುರ್ತು ನಿರ್ಮಾಣಕ್ಕೆ ಸಂಸದ ಸೂಚನೆ

| Published : Aug 04 2025, 12:30 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ೬೬ರ ಸರ್ವಿಸ್ ರಸ್ತೆಯ ಅಭಿವೃದ್ಧಿ ಮತ್ತಿತರ ಸಮಸ್ಯೆಯ ಬಗ್ಗೆ ರಜತಾದ್ರಿಯ ಜಿಲ್ಲಾಧಿಕಾರಿಯವರ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಸಮಕ್ಷಮದಲ್ಲಿ ಇಲಾಖಾಮಟ್ಟದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ರಾಷ್ಟ್ರೀಯ ಹೆದ್ದಾರಿ ೬೬ರ ಸರ್ವಿಸ್ ರಸ್ತೆಯ ಅಭಿವೃದ್ಧಿ ಮತ್ತಿತರ ಸಮಸ್ಯೆಯ ಬಗ್ಗೆ ರಜತಾದ್ರಿಯ ಜಿಲ್ಲಾಧಿಕಾರಿಯವರ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಸಮಕ್ಷಮದಲ್ಲಿ ಇಲಾಖಾಮಟ್ಟದ ಸಭೆ ನಡೆಯಿತು.ಸಭೆಯಲ್ಲಿ ಕುಂದಾಪುರದಿಂದ ಹೆಜಮಾಡಿ ವರೆಗಿನ ೨೬ ಕಿ.ಮೀ .ಅನುಮೋದಿತ ಸರ್ವೀಸ್ ರಸ್ತೆಯನ್ನು ತಕ್ಷಣ ಆರಂಭಿಸಲು ಅಧಿಕಾರಿಗಳಿಗೆ ಸಂಸದ ಕೋಟ ಸೂಚನೆ ನೀಡಿದರು.ಸಂತೆಕಟ್ಟೆ ಮತ್ತು ಕಲ್ಯಾಣಪುರದ ಅಂಡರ್‌ಪಾಸ್ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಿತು. ಮುಖ್ಯ ರಸ್ತೆಯ ಒಂದು ಬದಿಯ ಭಾಗ ಪೂರ್ಣಗೊಂಡಿದ್ದು, ಇನ್ನೊಂದು ಬದಿಯ ರಸ್ತೆಯು ಮುಗಿಯದ ಬಗ್ಗೆ ಸಂಸದರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕ ಜಾವೇದ್ ಉತ್ತರಿಸಿ, ಇನ್ನೊಂದು ಬದಿಯ ರಸ್ತೆಯಲ್ಲಿ ಅಂತರ್ಜಲ ಹೆಚ್ಚಾಗಿ ಮಳೆಗಾಲ ಮುಗಿಯುವ ಮುಂಚೆ ಪ್ರಾರಂಭ ಮಾಡಿದ್ದರೆ, ಗುಣಮಟ್ಟದಲ್ಲಿ ಲೋಪವಾಗಿ ರಸ್ತೆಯು ಜರಿಯುವ ಸಂಭವವಿದೆ ಎಂದು ತಿಳಿಸಿ, ಮಳೆಗಾಲ ಮುಗಿಯುವವರೆಗೆ ಅವಕಾಶ ಕೋರಿದರು.ಅಂಬಲಪಾಡಿಯ ಒಂದು ಜಂಕ್ಷನ್‌ಬಳಿ ನೀರು ತುಂಬಿದ ಕಾರಣ ವಾಹನ ಸಂಚಾರಕ್ಕೆ ಅಡೆ ತಡೆಯಾಗಿ ಪೊಲೀಸ್ ಅಧಿಕಾರಿಗಳು ಹೊಂಡ ತುಂಬಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವರದಿಯಾದ ಬಗ್ಗೆ ಅಧಿಕಾರಿಗಳನ್ನು ಸಂಸದರು ತರಾಟೆಗೆ ತೆಗೆದುಕೊಂಡರು.ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಚರಂಡಿಯ ನೀರು ನೇರವಾಗಿ ರಸ್ತೆಗೆ ಹರಿದಿದ್ದರಿಂದ, ಮಳೆಗಾಲದಲ್ಲಿ ತೀವ್ರವಾಗಿ ಮಳೆ ಸುರಿದಿದ್ದರಿಂದ ಹೊಂಡ ಬಿದ್ದದ್ದು ನಿಜ. ಆದರೆ ಈಗ ಹೊಂಡವನ್ನು ಸಂಪೂರ್ಣವಾಗಿ ಇಂಟರ್‌ಲಾಕ್ ಮಾದರಿಯಲ್ಲಿ ಮುಚ್ಚಿಸಿದ್ದು, ಪ್ರಸ್ತುತ ಸುಗಮ ಸಂಪರ್ಕಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಕಟಪಾಡಿ ಅಂಡರ್ ಪಾಸ್ ಕಾಮಗಾರಿಯನ್ನು ಪ್ರಾರಂಭಿಸಲುವ ಬಗ್ಗೆ ಅಕ್ಟೋಬರ್‌ನಲ್ಲಿ ಕೆಲಸ ಆರಂಭಿಸಲು, ಉಳಿದ ಅವಧಿಯಲ್ಲಿ ಸರ್ವಿಸ್ ರಸ್ತೆಯನ್ನು ಸಮರ್ಪಕಗೊಳಿಸಬೇಕು ಮತ್ತು ಕಾಮಗಾರಿ ಪ್ರಾರಂಭಿಸುವ ಮುನ್ನ ಸಾಮಗ್ರಿ ಸಂಗ್ರಹಣೆಯನ್ನು ಮಾಡಬೇಕೆಂದು ತಿಳಿಸಿದರು.ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಧರ್ಮಾವರಂ ಆಡಿಟೋರಿಯಂ ವರೆಗೆ ಪ್ಲೈ ಓವರ್ ನಿರ್ಮಾಣ ಮತ್ತು ಸಾಸ್ತಾನ ಗುರುನರಸಿಂಹ ದೇವಸ್ಥಾನದಿಂದ ಆಂಜನೇಯ ದೇವಸ್ಥಾನದ ಎದುರಿಗೆ ಅಂಡರ್‌ಪಾಸ್ ನಿರ್ಮಾಣದ ಬಗ್ಗೆ ಸಮಗ್ರ ವರದಿಯನ್ನು ತಯಾರಿಸಬೇಕು ಮತ್ತು ಗುರುನರಸಿಂಹ ದೇವಸ್ಥಾನದ ರಥಹಬ್ಬದ ಸಮಯದಲ್ಲಿ ಆಕಡೆಯಿಂದ ಈಕಡೆಗೆ ಸಾಗಿಸಲು ಸಾಧ್ಯವಾಗುವಂತೆ ಅಂಡರ್‌ಪಾಸ್ ನಿರ್ಮಾಣವನ್ನು ಮಾಡಬೇಕು ಎಂದು ತಿಳಿಸಿದರು.ಉಡುಪಿ ಜಿಲ್ಲಾ ಪತ್ರಕರ್ತರಿಗೆ ಈ ಮೊದಲು ನೀಡಿದಂತೆ, ಸಾಸ್ತಾನ ಟೋಲ್‌ಗೇಟ್‌ನಲ್ಲಿ ಉಚಿತ ಪಾಸ್ ನೀಡಬೇಕೆಂದು ಸಭೆಗೆ ಸಂಸದ ಕೋಟ ಸೂಚಿಸಿದರು.ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಶ್ಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್, ಪ್ರಾಧಿಕಾರದ ಇಂಜಿನಿಯರ್ ಮತ್ತು ಇತರ ಕಾಮಗಾರಿಗಳ ಗುತ್ತಿಗೆದಾರರು ಹಾಜರಿದ್ದರು.