ಪೊಲೀಸ್‌ ಭದ್ರತೆಯಲ್ಲಿ 26 ಅಂಗಡಿಗಳ ತೆರವು

| Published : Apr 24 2025, 11:47 PM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸೇರಿದ ಜಾಗೆಯಲ್ಲಿರುವ ಅಂಗಡಿಗಳ ಪೈಕಿ ಪೊಲೀಸ್‌ ಭದ್ರತೆಯಲ್ಲಿ ೨೬ ಹಳೆಯ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸೇರಿದ ಜಾಗೆಯಲ್ಲಿರುವ ಅಂಗಡಿಗಳ ಪೈಕಿ ಪೊಲೀಸ್‌ ಭದ್ರತೆಯಲ್ಲಿ ೨೬ ಹಳೆಯ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಕಳೆದ ೧೯ರಂದು ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅಂಗಡಿಗಳ ಮಾಲೀಕರು ಬ.ಬಾಗೇವಾಡಿಯ ಸಿವಿಲ್ ಕೋರ್ಟ್‌ನಲ್ಲಿ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ಕೋರಿ ಮನವಿ ಸಲ್ಲಿಸಿದರು. ತಡೆಯಾಜ್ಞೆ ಮಧ್ಯಾಹ್ನ 2 ಗಂಟೆಗೆ ಸಿಕ್ಕಿದ್ದು, ಅಷ್ಟರೊಳಗೆ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದ್ದಾರೆ ಎಂದು ಅಂಗಡಿಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ನಾವು 40 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ನಮಗೆ ಗ್ರಾಮ ಪಂಚಾಯಿತಿಯಿಂದಲೂ ದಾಖಲೆ ನೀಡಿದ್ದಾರೆ. ಆದರೂ ತೆರವು ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು, ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಸಂಪರ್ಕಿಸಿದಾಗ, ಹೂವಿನಹಿಪ್ಪರಗಿಯ ಪಿಕೆಪಿಎಸ್ ಬ್ಯಾಂಕಿಗೆ ಸೇರಿದ ಜಾಗದಲ್ಲಿ ೨೬ ಅಂಗಡಿಗಳಿವೆ. ಅವುಗಳನ್ನು ತೆರವುಗೊಳಿಸಲು ಬ್ಯಾಂಕ್‌ ಆದೇಶ ತಂದಿದೆ. ನಾವು ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳಕ್ಕೆ ಹೋಗಿದ್ದೆವು. ನಮ್ಮೊಂದಿಗೆ ಡಿವೈಎಸ್ಪಿ, ಪಿಐ, ಇಒ, ಪಿಡಿಒ ಸಹ ಇದ್ದರು ಎಂದು ತಿಳಿಸಿದರು.

-------------

ಬಾಕ್ಸ್‌

ಕಾರ್ಯಾಚರಣೆ ವಿರೋಧಿಸಿ ಆತ್ಮಹತ್ಯೆ ಯತ್ನ

ಹೂವಿನ ಹಿಪ್ಪರಗಿಯಲ್ಲಿನ ಈ ತೆರವು ಕಾರ್ಯಾಚರಣೆ ವಿರೋಧಿಸಿ ಗ್ರಾಮದ ಯುವಕ ಪ್ರದೀಪ ಗೊಳಸಂಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿಡಿಯೋ ವೈರಲ್‌ ಆಗಿದೆ. ಅಲ್ಲದೇ, ವಿಡಿಯೋ ಮಾಡಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ತಹಸೀಲ್ದಾರ್‌ ಸೋಮನಕಟ್ಟಿ ಮತ್ತು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಕೆಪಿಎಸ್ ಅಧ್ಯಕ್ಷ ಪರಮಾನಂದ ಗೋಠೆದ, ಬಿ.ಎಸ್.ಪಾಟೀಲ ಯಾಳಗಿ ಅವರ ವಿರುದ್ಧ ಆರೋಪ ಮಾಡಿ ನನ್ನ ಸಾವಿಗೆ ಇವರೆ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಈ ತೆರವು ಕಾರ್ಯಾಚರಣೆಗೆ ಅಧಿಕಾರಿಗಳೇ ಕಾರಣ. ಅಲ್ಲದೇ, ಪಿಕೆಪಿಎಸ್ ಅಧ್ಯಕ್ಷ ಪರಮಾನಂದ ಗೋಠೆದ, ಬಿ.ಎಸ್.ಪಾಟೀಲ ಯಾಳಗಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ. ಅವರ ವಿರುದ್ಧ ಪ್ರಕರಣಗಳು ಇವೆ ಎಂದು ಆರೋಪ ಮಾಡಿ ನಾನು ವಿಷ ಸೇವಿಸಿದ್ದು, ನನ್ನ ಸಾವಿಗೆ ಇವರೆಲ್ಲರೂ ಕಾರಣರು. ಸದ್ಯ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿದ್ದೇನೆ ಎಂದು ಸಹ ಹೇಳಿದ್ದಾನೆ. ನನ್ನ ಸಾವಿಗೆ ಅಧಿಕಾರಿಗಳು, ಸಚಿವರು, ಜಿಲ್ಲಾಧಿಕಾರಿಗಳು ಕಾರಣರಾಗುತ್ತಾರೆ. ಈ ವಿಡಿಯೋ ಸಿಎಂ ಅವರಿಗೆ ಮುಟ್ಟಬೇಕು ಎಂದು ಹೇಳಿದ್ದು, ಆ ವಿಡಿಯೋ ಇದೀಗ ವೈರಲ್‌ ಆಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಹೂವಿನಹಿಪ್ಪರಗಿಯಲ್ಲಿ ಅಂಗಡಿಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ. ಈ ಅಂಗಡಿಗಳಲ್ಲಿ ವೈರಲ್ ಆದ ಯುವಕನ ಅಂಗಡಿ ಸಹ ಇದೆ ಎಂದು ಗೊತ್ತಾಗಿದೆ. ತೆರವು ಮಾಡುವ ಸಂದರ್ಭದಲ್ಲಿ ಯುವಕನ ತಾಯಿ, ಸಹೋದರ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ತೆರವು ಮಾಡಿದ್ದಾರೆ. ಈ ಯುವಕ ವಿಷ ಸೇವಿಸಿದ್ದ ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಈತ ಹೇಳಿರುವ ಪ್ರಕಾರ ಹುಬ್ಬಳ್ಳಿಯ ಎಲ್ಲ ಆಸ್ಪತ್ರೆಗಳಲ್ಲಿ ಚೆಕ್ ಮಾಡಿದರೂ ಯಾವ ಆಸ್ಪತ್ರೆಯಲ್ಲಿಯೂ ಈತ ಇರುವುದು ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದರು.