ಸಾರಾಂಶ
ನೈರುತ್ಯ ರೈಲ್ವೆ ವಲಯದಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸೆ.11ರಂದು ಕಾಮಗಾರಿ ಬಿಡ್ ತೆರೆಯಲಿದ್ದು, ಕಾಮಗಾರಿ ನಿರ್ವಹಿಸುವ ಏಜೆನ್ಸಿ ಅಂತಿಮಗೊಳ್ಳಲಿದೆ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡದಿಂದ ಮಡಕಶಿರಾ ನಡುವಿನ 22 ಕಿಮೀ ಉದ್ದದ ಹೊಸ ಬ್ರಾಡ್‍ಗೇಜ್ ರೈಲುಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ₹265.92 ಕೋಟಿ ಅನುದಾನ ಒದಗಿಸುವ ಮೂಲಕ ತುಮಕೂರು-ರಾಯದುರ್ಗ ಹೊಸ ಬ್ರಾಡ್‍ಗೇಜ್ ರೈಲು ಮಾರ್ಗಕ್ಕೆ ವೇಗ ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನೈರುತ್ಯ ರೈಲ್ವೆ ವಲಯದಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸೆ.11ರಂದು ಕಾಮಗಾರಿ ಬಿಡ್ ತೆರೆಯಲಿದ್ದು, ಕಾಮಗಾರಿ ನಿರ್ವಹಿಸುವ ಏಜೆನ್ಸಿ ಅಂತಿಮಗೊಳ್ಳಲಿದೆ. ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಯೋಜನೆಯಡಿ ಪಾವಗಡ ಮತ್ತು ಮಡಕಶಿರಾ ನಗರಗಳಲ್ಲಿ 510 ಚದುರ ಮೀಟರ್ ವಿಸ್ತೀರ್ಣದ ಸುಸಜ್ಜಿತ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ, ಹಾಗೂ ಈ ಮಾರ್ಗದಲ್ಲಿ ತಡೆರಹಿತ ರೈಲು ಸಂಚಾರಕ್ಕೆ 3 ಪ್ರಮುಖ ಸೇತುವೆಗಳು, 32 ಸಣ್ಣ ಸೇತುವೆಗಳು ನಿರ್ಮಾಣವಾಗಲಿವೆ. ಯಾವುದೇ ಅಡೆತಡೆಯಿಲ್ಲದೇ ರೈಲುಗಳು ಪ್ರತಿಗಂಟೆಗೆ 110 ಕಿಮೀ ವೇಗದಲ್ಲಿ ಚಲಿಸಲು ಯಾವ ಅಗತ್ಯ ಮೂಲಸೌಕರ್ಯಗಳು ಬೇಕೋ ಆ ಎಲ್ಲವನ್ನೂ ಈ ಯೋಜನೆ ಒಳಗೊಂಡಿದೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.