ರಸ್ತೆ ಅಭಿವೃದ್ಧಿಗೆ ₹27.5 ಕೋಟಿ ಅನುದಾನ ಮಂಜೂರು

| Published : Oct 11 2025, 12:02 AM IST

ಸಾರಾಂಶ

ಸರ್ಕಾರ ನೀಡಿರುವ ಅನುದಾನದಲ್ಲಿ ರಸ್ತೆಗಳಿಗೆ ಹಂಪ್ಸ್ ನಿರ್ಮಾಣ, ರಸ್ತೆ ಅಗಲೀಕರಣ, ಜೋಡಿ ರಸ್ತೆ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ, ರಸ್ತೆ ಅಭಿವೃದ್ಧಿಗೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ. ಲೋಕೋಪಯೋಗಿ ಇಲಾಖೆ ಒಂದರಿಂದಲೇ ಈಗಾಗಲೇ 150 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಂತಾಮಣಿ ತಾಲೂಕಿನಲ್ಲಿ 8.94 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ತಿಳಿಸಿದರು. ಅವರು ಶುಕ್ರವಾರ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಶುಕ್ರವಾರ ಆಯೋಜಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ₹ 27.5 ಕೋಟಿ ಅನುದಾನ

ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ 30 ಕೋಟಿ ಅನುದಾನ ನೀಡುವಂತೆ ಲೋಕೋಪಯೋಗಿ ಇಲಾಖೆಯ ಸಚಿವರಲ್ಲಿ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರ ಸಹಕಾರದಿಂದ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಚಿಂತಾಮಣಿ ತಾಲ್ಲೂಕಿನಲ್ಲಿ ಕೈಗೊಳ್ಳಲು 27.5 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಚಿವರು ಹೇಳಿದರು.

ಈ ಅನುದಾನದಲ್ಲಿ ರಸ್ತೆಗಳಿಗೆ ಹಂಪ್ಸ್ ನಿರ್ಮಾಣ, ರಸ್ತೆ ಅಗಲೀಕರಣ, ಜೋಡಿ ರಸ್ತೆ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ, ರಸ್ತೆ ಅಭಿವೃದ್ಧಿಗೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ. ಲೋಕೋಪಯೋಗಿ ಇಲಾಖೆ ಒಂದರಿಂದಲೇ ಈಗಾಗಲೇ 150 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ. ಇದರ ಭಾಗವಾಗಿ ಇಂದು 8.94 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.ಅಂತರ್ಜಲ ವೃದ್ಧಿಗೆ ಆದ್ಯತೆ ಚಿಂತಾಮಣಿ ಭಾಗದಲ್ಲಿ ಈ ವರ್ಷ ವಾಡಿಕೆ ಪ್ರಮಾಣದಲ್ಲಿ ಮಳೆಯಾಗಿದ್ದರೂ ಸಹ ಕೆರೆಗಳಿಗೆ ನೀರು ತುಂಬಿಲ್ಲ. ಚಿಂತಾಮಣಿ, ಶಿಡ್ಲಘಟ್ಟ ಭಾಗದಲ್ಲಿ ಬಹುತೇಕ ಕೆರೆಗಳು ಶೇ. 30 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ತುಂಬಿವೆ. ಹಿಂದಿನ ಹಲವು ವರ್ಷಗಳ ಮಳೆಯ ಪ್ರಮಾಣವನ್ನು ಅವಲೋಕಿಸಿದಾಗ ಚಿಂತಾಮಣಿ ಭಾಗಕ್ಕೆ ಶಾಶ್ವತವಾಗಿ ಅಂತರ್ಜಲ ವೃದ್ಧಿಸುವ ಕಾಮಗಾರಿಗಳನ್ನು ಕೈಗೊಳ್ಳುವ ಅನಿವಾರ್ಯತೆ ಇದೆ ಎಂದರು.

ಕೆಸಿ, ಎಚ್‌ಎನ್‌ ವ್ಯಾಲಿ ನೀರು

ಈ ಹಿನ್ನೆಲೆಯಲ್ಲಿ ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ನೀರಾವರಿ ಯೋಜನೆಗಳಿಂದ ಚಿಂತಾಮಣಿ ತಾಲೂಕಿನ 119 ಕೆರೆಗಳಿಗೆ ಹಾಗೂ ಶಿಡ್ಲಘಟ್ಟ ತಾಲೂಕಿನ 37 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಕೆಸಿ ವ್ಯಾಲಿಯ ಎರಡನೇ ಹಂತದಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ 50 ಕೆರೆ ತುಂಬಿಸುವ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲದೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸರಣಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಉದ್ದೇಶಕ್ಕೆ ಈಗಾಗಲೇ 140 ಕೋಟಿ ಅನುದಾನ ಮಂಜೂರಾಗಿದ್ದು, ಈ ಪೈಕಿ 90 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುನಿನಾರಾಯಣಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಶ್ರೀರಾಮರೆಡ್ಡಿ, ತಹಸೀಲ್ದಾರ್ ಸುದರ್ಶನ ಯಾದವ್, ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.