ಸಾರಾಂಶ
-ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬಿ.ಜಿ.ಗೋವಿಂದಪ್ಪ
-----ಕನ್ನಡಪ್ರಭ ವಾರ್ತೆ ಹೊಸದುರ್ಗ:
ಗಣಿಬಾಧಿತ ಪ್ರದೇಶಾಭಿವೃದ್ದಿ ಯೋಜನೆಯಡಿ ಆರೋಗ್ಯ ಇಲಾಖೆಗೆ 27 ಕೋಟಿ ರೂಗಳ ಅನುದಾನ ನೀಡಲಾಗಿದ್ದು, ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ 9 ಕೋಟಿ ರೂ ಹಾಗೂ ಗ್ರಾಮಾಂತರ ಪ್ರದೇಶದ ಆರೋಗ್ಯ ಉಪಕೇಂದ್ರಗಳ ಅಭಿವೃದ್ದಿಗೆ 18 ಕೋಟಿ ರೂ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಅಭಿವೃದ್ದಿ ಯೋಜನೆಗಳ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಾನು ಪ್ರಥಮ ಬಾರಿ ಶಾಸಕನಾಗಿದ್ದಾಗ ಡಾ.ರಾಮದಾಸ್ ಅವರಿಂದ ಜಮೀನು ಪಡೆದು ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಉದ್ಘಾಟಿಸಿದೆ. ಇಂದು ಜನರ ಆರೋಗ್ಯ ರಕ್ಷಣೆಗಾಗಿ 27 ಕೋಟಿ ರೂಗಳ ಅನುದಾನವನ್ನು ಆರೋಗ್ಯ ಇಲಾಖೆಗೆ ನೀಡಿದ್ದೇನೆ ಎಂದರು.ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಸತಿ ರಹಿತರಿಗೆ ಪ್ರತಿ ಮನೆ ನಿರ್ಮಾಣಕ್ಕೆ 7 ಲಕ್ಷ ರೂ ವಂತಿಗೆ ನೀಡಲಾಗುತ್ತದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಆಗಿಲ್ಲ. ತಾಲೂಕಿನ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದರು.
ತಾಲೂಕಿನ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಕೂಡು ರಸ್ತೆ ಕಾಮಗಾರಿಗೆ 25 ಕೋಟಿ ರೂ, ದೇವಾಲಯಗಳ ನಿರ್ಮಾಣಕ್ಕೆ 13 ಕೋಟಿ ರೂ ಅನುದಾನ ನೀಡಿ ಕೆಲಸ ಪ್ರಾರಂಭಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ 1.25 ಸಾವಿರ ಕೋಟಿ ರೂಗಳ ಕಾಮಗಾರಿಗಳ ಸಾಲವನ್ನು ತೀರಿಸುವ ಹೊಣೆಗಾರಿಕೆ ಈಗೀನ ಕಾಂಗ್ರೆಸ್ ಸರ್ಕಾರದ ಮೇಲಿದೆ. ಹೀಗಾಗಿ ಕಾರ್ಯಕರ್ತರು ಕೆಲಸ ಪಡೆಯಲು ಒಂದಷ್ಟು ಸಮಯ ಕಾಯಬೇಕಾಗುತ್ತದೆ ಎಂದರು.ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರಕುತ್ತಿದ್ದರೂ ಕೆಲವು ಲೋಪ ದೋಷಗಳಿವೆ. ಅವುಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಆಸ್ಪತ್ರೆಯಲ್ಲಿ ಹೆರಿಗೆ ಸಂಖ್ಯೆ ಕಡಿಮೆ ಇವೆ. ಹೀಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬೇಡಿಕೆಯಿದ್ದರೂ ಇಲಾಖೆ ಹಂತದಲ್ಲಿ ಮಂಜೂರಾತಿಗೆ ಹಿನ್ನಡೆಯಾಗಿದೆ. ಆದರೂ ಮಂಜೂರಾತಿಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವೆ. ಪ್ರಸ್ತುತ ವೈದ್ಯರ ಕೌನ್ಸೆಲಿಂಗ್ ನಡೆಯುತ್ತಿದ್ದು, ತಾಲೂಕಿನ ಕೆಲ ಉಪಕೇಂದ್ರಗಳಲ್ಲಿ ಇರುವ ವೈದ್ಯರ ಕೊರತೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಿಎಚ್‌ಓ ರೇಣುಕಾ ಪ್ರಸಾದ್, ಟಿಎಚ್‌ಓ ರಾಘವೇಂದ್ರ ಪ್ರಸಾದ್, ಹೊಸದುರ್ಗ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಕೇಶ್, ಡಾ.ಸಂಜಯ್, ಪುರಸಭೆ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಗೀತಾ, ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ವೆಂಕಟೇಶ್ ದಳವಾಯಿ, ಅರುಣಾ, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಕೆಪಿಸಿಸಿ ಸದಸ್ಯ ಅಲ್ತಾಪ್ ಪಾಷ, ಎಂ.ಪಿ.ಶಂಕರಪ್ಪ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕೆಡಿಪಿ ಸದಸ್ಯೆ ದೀಪಿಕಾ ಇದ್ದರು.-----
ಪೋಟೋ: 9ಎಚ್.ಎಸ್.ಡಿ1ಹೊಸದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 9 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಭೂಮಿ ಪೂಜೆ ನೆರವೇರಿಸಿದರು.