ತುಂಗಭದ್ರಾ ನದಿ ಹತ್ತಿರದಲ್ಲೇ ಹರಿಯುತ್ತಿದ್ದರೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೂಡುತ್ತಿಲ್ಲ.

ಹೂವಿನಹಡಗಲಿ: ತುಂಗಭದ್ರಾ ನದಿ ಹತ್ತಿರದಲ್ಲೇ ಹರಿಯುತ್ತಿದ್ದರೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೂಡುತ್ತಿಲ್ಲ. ತಳಕಲ್ಲು ಕೆರೆಗೆ ದೇವಗೊಂಡನಹಳ್ಳಿ ಕೆರೆಯಿಂದ ನೀರು ತುಂಬಿಸುವ ₹27 ಕೋಟಿ ಡಿಪಿಆರ್‌ನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದ್ದಾರೆಂದು ಶಾಸಕ ಕೃಷ್ಣನಾಯ್ಕ ಆರೋಪಿಸಿದರು.

ಇಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆಯ ಆತ್ಮ ನಿರ್ಭರ ಭಾರತ ಯೋಜನೆಯಡಿ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ತಳಕಲ್ಲು ಕೆರೆಗೆ ನೀರು ತುಂಬಿಸಬೇಕೆಂದು ಹತ್ತಾರು ಹೋರಾಟಗಳು ನಡೆದು ರಾಜ್ಯ ಹೆದ್ದಾರಿ ಬಂದ್‌ ಕೂಡ ಆಗಿತ್ತು. ಕೆರೆ ತುಂಬಿಸಲು ₹27 ಕೋಟಿ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಇದಕ್ಕೆ ಹಣ ನೀಡದೇ ಸರ್ಕಾರ ಈ ಕೆರೆಯ ಡಿಪಿಆರ್‌ನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಈ ಕುರಿತು ಪ್ರತಿ ಸದನದಲ್ಲಿ ಚರ್ಚಿಸಿದ್ದರೂ ಯಾವುದೇ ಕ್ರಮವಿಲ್ಲ. ಅನುದಾನ ನೀಡುವಲ್ಲಿ ಸಾಕಷ್ಟು ತಾರತಮ್ಯ ಉಂಟಾಗುತ್ತಿದೆ. ಇದರಿಂದ ನೀರಾವರಿ ಯೋಜನೆಗಳಿಗೆ ಭಾರಿ ಪೆಟ್ಟು ಬೀಳುತ್ತಿದೆ ಎಂದರು.

ತಾಲೂಕಿನಲ್ಲಿ 1.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 85 ಸಾವಿರ ಹೆಕ್ಟೇರ್‌ ಪ್ರದೇಶ ಕೃಷಿಗೆ ಯೋಗ್ಯವಾಗಿದೆ. ಸಿಂಗಟಾಲೂರು ಏತ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಯ ಏತ ನೀರಾವರಿ ಸೇರಿ 32 ಸಾವಿರ ಎಕರೆ ನೀರಾವರಿ ಪ್ರದೇಶವೆಂದು ದಾಖಲೆ ಇದೆ. ಆದರೆ ವಾಸ್ತವದಲ್ಲಿ ಕೇವಲ 20 ಸಾವಿರ ಎಕರೆ ಪ್ರದೇಶ ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ. ಉಳಿದಂತೆ ನಮ್ಮ ಭಾಗದ ನದಿ ನೀರು ಸದ್ಬಳಕೆಗಾಗಿ ನೀರಾವರಿ ಸೌಲಭ್ಯ ಮಾಡಲಾಗಿತ್ತು. ಅವುಗಳು ಸರಿಯಾಗಿ ನಿರ್ವಹಣೆ ಇಲ್ಲದೇ ನೀರನ್ನು ಹಾಗೆಯೇ ಆಂಧ್ರ ಪ್ರದೇಶಕ್ಕೆ ಬಿಡುತ್ತಿದ್ದೇವೆ. ಇದು ನಮ್ಮ ದುರಂತ ಎಂದರು.

ನೀರಾವರಿ ಯೋಜನೆಗಳು ಮತ್ತು ಕೆರೆ ತುಂಬಿಸುವ ವಿಚಾರವಾಗಿ ಈವರೆಗೂ ಸರ್ಕಾರಕ್ಕೆ ಅವಕಾಶ ನೀಡಿದ್ದೆವು. ಆದರೆ ಇನ್ಮುಂದೆ ಬೀದಿ ಇಳಿದು ಉಗ್ರ ಹೋರಾಟ ಹಮ್ಮಿಕೊಳ್ಳಲು ರೈತರ ಸಹಕಾರ ನಿರಂತರವಾಗಿ ಇರಬೇಕೆಂದು ಹೇಳಿದರು.

ತಾಲೂಕಿನ ದಾಸನಹಳ್ಳಿ ಕೆರೆ, ಹ್ಯಾರಡ ಕೆರೆ ನೀರು ತುಂಬಿಸುವ ಪೈಪ್‌ಲೈನ್‌ ಸೋರುತ್ತಿದೆ. ಆ ನೀರು ರೈತರ ಜಮೀನುಗಳಲ್ಲಿ ನಿಂತು ರೈತರ ಬೆಳೆ ಹಾನಿಯಾಗಿತ್ತು. ಆ ರೈತರಿಗೆ ತಲಾ ₹20 ಸಾವಿರವನ್ನು ಸ್ವಂತಕ್ಕೆ ನೀಡಿದ್ದೇನೆ. ರೈತ ಪರ ಕಾಳಜಿ ಸೋಗಿನಲ್ಲಿರುವ ಸರ್ಕಾರ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಯಾ ಪೈಸೆ ನೀಡುತ್ತಿಲ್ಲ ಎಂದು ದೂರಿದರು.

ಮೆಕ್ಕೆಜೋಳ ಖರೀದಿ ಕೇಂದ್ರ ಕುರಿತು ರೈತರಿಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸುತ್ತೇವೆ. ಜೆಸ್ಕಾಂ ಇಲಾಖೆಯಲ್ಲಿ ರೈತರಿಗಾಗಿ ಬರುವ ವಿದ್ಯುತ್‌ ಪರಿವರ್ತಕ (ಟಿಸಿ)ಗಳಿಗೆ ರೈತರಿಂದ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಸಂಪೂರ್ಣ ತಡೆಗಟ್ಟಿ ಕೂಡಲೇ ರೈತರಿಗೆ ಟಿಸಿ ನೀಡುವಂತೆ ಸೂಚನೆ ನೀಡಿದ್ದೇನೆ. ರೈತರ ಕಷ್ಟ ನಷ್ಟ ಅರಿತು ರೈತ ಪರ ಕಾಳಜಿ ಹೊಂದಿದ್ದೇವೆಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಎಚ್‌.ನಾಗರಾಜ ಮಾತನಾಡಿ, ದೇಶದ ಪ್ರಧಾನಿ ಚೌದರಿ ಚರಣ್‌ಸಿಂಗ್‌ ಇವರ ಜನ್ಮ ದಿನಾಚರಣೆ ಅಂಗವಾಗಿ ರೈತರ ದಿನ ಆಚರಿಸಲಾಗುತ್ತಿದೆ. ಈ ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಅವರು, ಹಸಿರು ಕ್ರಾಂತಿ ಹರಿಕಾರರಾಗಿದ್ದರು ಎಂದರು.

ಕೃಷಿ ಸಮಾಜದ ಅಧ್ಯಕ್ಷ ದೀಪದ ಕೃಷ್ಣಪ್ಪ, ಉಪಾಧ್ಯಕ್ಷ ಬಸವರಾಜ, ರೈತ ಸಂಘದ ಅಧ್ಯಕ್ಷ ಎಚ್‌.ಸಿದ್ದಪ್ಪ, ಭಾರತ ಕಿಸಾನ್‌ ಸಂಘದ ಅಧ್ಯಕ್ಷ ವಿ.ಬಿ. ಕೊಟ್ರೇಶ, ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್‌.ಎಂ.ಸಿದ್ದೇಶ, ಸತ್ಯಪ್ಪ, ಪಶು ವೈದ್ಯಾಧಿಕಾರಿ ನಾರಾಯಣ ಬಣಕಾರ, ತೋಟಗಾರಿಕೆ ಇಲಾಖೆಯ ಚಂದ್ರಕುಮಾರ, ಎಸ್‌.ತಿಮ್ಮಣ್ಣ, ನಾಗರಾಜ, ಸತೀಶ, ಚಂದ್ರಶೇಖರ ಪೂಜಾರ್‌, ಎಚ್‌.ಮಂಜುನಾಥ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಮಂಜುನಾಥ ಭುವನಳ್ಳಿ, ಸುನಿತಾ, ವೀರಸಿಂಗ್‌, ಸವಿತಾ ರೇವಡಿ ಇದ್ದರು.

ಇದೇ ಸಂದರ್ಭದಲ್ಲಿ ಸಾವಯವ ಕೃಷಿ ಬೆಳೆಗಳು, ಔಷಧಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಹಾಗೂ ವಸ್ತು ಪ್ರದರ್ಶನ ಮಾಡಲಾಗಿತ್ತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 6 ರೈತರನ್ನು ಸನ್ಮಾನಿಸಲಾಯಿತು.