ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಧಾನ್ಯಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳುವ ಕೊಡಗಿನ ಸುಗ್ಗಿಯ ಹಬ್ಬ ‘ಹುತ್ತರಿ’ಯನ್ನು ನ.27ರಂದು ಆಚರಿಸಲು ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಸೋಮವಾರ ದಿನ ನಿಗದಿಪಡಿಸಲಾಯಿತು.
ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ನಾಡಿನ 13 ತಕ್ಕಮುಖ್ಯಸ್ಥರು, ಊರಿನ ಗಣ್ಯರು ಸಂಪ್ರದಾಯದಂತೆ ದೇವಾಲಯದ ಅಮ್ಮಂಗೇರಿ ಜ್ಯೋತಿಷ್ಯರಾದ ಶಶಿಕುಮಾರ್, ಕಣಿಯರ ನಾಣಯ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ದಿನ ಮತ್ತು ಆಚರಣೆಯ ಸಮಯ ನಿಗದಿಪಡಿಸಿದರು.ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನವಾದ ನ.27ರಂದು ರಾತ್ರಿ 7.20 ಗಂಟೆಗೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆ ಕಟ್ಟುವುದು, 8.20ಕ್ಕೆ ಕದಿರು ತೆಗೆಯುವುದು ಮತ್ತು 9.20ಕ್ಕೆ ಪ್ರಸಾದ ಸ್ವೀಕಾರ ಮಾಡಲು ಶುಭ ಘಳಿಗೆಯಾಗಿರುವುದನ್ನು ನಿರ್ಧರಿಸಲಾಯಿತು.
ಸಂಪ್ರದಾಯದಂತೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪ್ರಥಮವಾಗಿ ಹುತ್ತರಿ ಆಚರಣೆ ಬಳಿಕ ನಾಡಿನೆಲ್ಲೆಡೆ ರಾತ್ರಿ 7.45ಕ್ಕೆ ನೆರೆ ಕಟ್ಟುವುದು, 8.45ಕ್ಕೆ ಕದಿರು ತೆಗೆಯುವುದು ಮತ್ತು 9.45ಕ್ಕೆ ಪ್ರಸಾದ ಸ್ವೀಕರಿಸುವ ಮೂಲಕ ನಾಡಿನಾದ್ಯಂತ ಸಂಭ್ರಮದ ಹುತ್ತರಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.ಹುತ್ತರಿಗೆ ಮುನ್ನ ದಿನವಾದ ನ.26ರಂದು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕಲಾಡ್ಚ ಹಬ್ಬವನ್ನು ಆಚರಿಸಲು ದಿನ ನಿಗದಿಪಡಿಸಲಾಯಿತು.
ಈ ಸಂದರ್ಭ ದೇಶ ತಕ್ಕರೂ, ದೇವತಕ್ಕರು ಆದ ಪರದಂಡ ಕುಟುಂಬದ ಪರವಾಗಿ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಧಾನ್ಯ ಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳುವ ಈ ಸಂದರ್ಭದಲ್ಲಿ ದೇವಾಲಯದ ಕಟ್ಟುಪಾಡುಗಳನ್ನು ಶ್ರದ್ಧಾ ಭಕ್ತಿಯಿಂದ ಜಿಲ್ಲೆಯ ಸಮಸ್ತ ಭಕ್ತರು ಅನುಸರಿಸಿ ಸಹಕರಿಸುವಂತೆ ಮನವಿ ಮಾಡಿದರು.ಭಕ್ತರು ದೇಶಕಟ್ಟು ಅನ್ನು ತಪ್ಪದೆ ಪಾಲಿಸಬೇಕು. ದೇಶಕಟ್ಟು ವಿಧಿಸಿದ ದಿನದಿಂದ 15 ದಿನಗಳ ನಂತರ ನಡೆಯುವ ಕಲ್ಲಾಡ್ಚ ದ ದಿನ ಕಟ್ಟು ಸಡಿಲಿಸುವ ವರೆಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ದೇಶ ಕಟ್ಟನ್ನು ಪಾಲಿಸಿ ಆಡಂಬರದ ಸಭೆ ಸಮಾರಂಭ, ಮದುವೆ, ಪ್ರಾಣಿ ಹಿಂಸೆ ಇತ್ಯಾದಿಗಳಿಂದ ದೂರವಿದ್ದು ಸಾಂಪ್ರದಾಯದಂತೆ ವಿಧಿ ವಿಧಾನಗಳನ್ನು ಪಾಲಿಸಬೇಕು ಎಂದರು.
ನಾಡಿನ ಸುಬೀಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅನಂತರ ದೇವಾಲಯದ ಮುಖ್ಯ ಅರ್ಚಕ ಕುಶ ಭಟ್ ಮಹಾಪೂಜೆ ವಿಧಿ ವಿಧಾನವನ್ನು ನೆರವೇರಿಸಿದರು. ಬಳಿಕ ಸಾರ್ವಜನಿಕರಿಗೆ ಹುತ್ತರಿ ದಿನ ನಿಗದಿ ವಿವರಗಳನ್ನು ತಿಳಿಸಲಾಯಿತು.ನಾಡಿನ ತಕ್ಕ ಮುಖ್ಯಸ್ಥರಾಗಿರುವ ಕಲ್ಯಾಟಂಡ ಮುತ್ತಪ್ಪ, ನಂಬುಡಮಂಡ ಸುಬ್ರಮಣಿ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಮೇಚಂಡ ಜಯ ಜೋಯಪ್ಪ, ಪರದಂಡ ವಿಠಲ, ಕುಂಡ್ಯೋಳಂಡ ವಿಶು ಪೂವಯ್ಯ, ಕೇಟೋಳಿರ ರಘು ಕುಟ್ಟಪ್ಪ, ಕೇಟೋಳಿರ ರಾಜಪ್ಪ ಕುಟ್ಟಪ್ಪ, ಪೇರಿಯಂಡ ಪೂವಯ್ಯ, ಕುಟ್ಟಂಚೆಟ್ಟೀರ ಶ್ಯಾಂ, ಕೇಲೇಟಿರ ಮಧು, ಕುಲ್ಲೇಟಿರ ನಂದಾ ನಾಚಪ್ಪ, ಬಡಕಡ ಸುರೇಶ್, ದೇವಾಲಯದ ಪಾರು ಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಕಣಿಯರ ಪ್ರಕಾಶ, ಜೀವನ ಇನ್ನಿತರರು ಉಪಸ್ಥಿತರಿದ್ದರು.