ಮಕ್ಕಳ ಕೌಟುಂಬಿಕ ಪರಿಸ್ಥಿತಿ, ಆರ್ಥಿಕ ಸಂಕಷ್ಟ, ಮೊಬೈಲ್ ಗೀಳು ಸೇರಿದಂತೆ ಹಲವು ಕಾರಣಗಳು ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಇದರ ಪರಿಣಾಮವಾಗಿ ಓದುವ ವಯಸ್ಸಿನಲ್ಲೇ ಕೆಲ ಮಕ್ಕಳು ಶಾಲೆಯಿಂದ ದೂರವಾಗಿದ್ದು, ತಮ್ಮ ಭವಿಷ್ಯವನ್ನು ಅನಿಶ್ಚಿತತೆಗೆ ದೂಡಿಕೊಳ್ಳುವಂತಾಗಿದೆ.

ರಾಘು ಕಾಕರಮಠ

ಅಂಕೋಲಾ: ಪ್ರೌಢಶಾಲಾ ಹಂತಕ್ಕೆ ತಲುಪುವ ವೇಳೆಯಲ್ಲೇ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಿಂದ ಹೊರಗುಳಿಯುತ್ತಿರುವ ಆತಂಕಕಾರಿ ಬೆಳವಣಿಗೆ ತಾಲೂಕಿನಲ್ಲಿ ಕಂಡುಬಂದಿದೆ. ತಾಲೂಕಿನಲ್ಲಿ 28 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅವರನ್ನು ಮರಳಿ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಹರಸಾಹಸ ನಡೆಸುತ್ತಿದೆ.

ತಾಲೂಕಿನಲ್ಲಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆ ಸೇರಿ 157 ಶಾಲೆಗಳಿವೆ. ಇದರಲ್ಲಿ ಒಟ್ಟು 6677 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಪ್ರಸಕ್ತ ಶಾಲಿನಲ್ಲಿ 28 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದಾರೆ.

ಮಕ್ಕಳ ಕೌಟುಂಬಿಕ ಪರಿಸ್ಥಿತಿ, ಆರ್ಥಿಕ ಸಂಕಷ್ಟ, ಮೊಬೈಲ್ ಗೀಳು ಸೇರಿದಂತೆ ಹಲವು ಕಾರಣಗಳು ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಇದರ ಪರಿಣಾಮವಾಗಿ ಓದುವ ವಯಸ್ಸಿನಲ್ಲೇ ಕೆಲ ಮಕ್ಕಳು ಶಾಲೆಯಿಂದ ದೂರವಾಗಿದ್ದು, ತಮ್ಮ ಭವಿಷ್ಯವನ್ನು ಅನಿಶ್ಚಿತತೆಗೆ ದೂಡಿಕೊಳ್ಳುವಂತಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಮುಖ್ಯಾಧ್ಯಾಪಕರು, ತಾಲೂಕು ಹಾಜರಾತಿ ಅಧಿಕಾರಿ, ಎಸ್ಡಿಎಂಸಿ ಸದಸ್ಯರು, ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರನ್ನು ಒಳಗೊಂಡ ಜಂಟಿ ತಂಡಗಳು ಮಕ್ಕಳ ಮನೆಗಳಿಗೆ ತೆರಳಿ ಪಾಲಕರೊಂದಿಗೆ ಚರ್ಚಿಸಿ, ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸುವಂತೆ ಮನವೊಲಿಸುತ್ತಿವೆ. ಹಾಗೆ ಸ್ಥಳ ಪರಿಶೀಲನೆ ಹಾಗೂ ಪಂಚನಾಮೆಯನ್ನೂ ಕೈಗೊಳ್ಳಲಾಗುತ್ತಿದೆ.ಡಿಜಿಟಲ್ ಹಾಜರಾತಿಯಿಂದ ನಿಗಾ: ಪ್ರಸಕ್ತ ಸಾಲಿನಿಂದ ಶಾಲೆಗಳಲ್ಲಿ ನಿರಂತರ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವಿದ್ಯಾವಾಹಿನಿ ಪೋರ್ಟಲ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈ ವ್ಯವಸ್ಥೆಯಿಂದ ಶಾಲೆಗೆ ನಿರಂತರವಾಗಿ ಗೈರುಹಾಜರಾಗುವ ಮಕ್ಕಳ ಮೇಲೂ ನಿಗಾ ಇರಿಸಲು ಸಾಧ್ಯವಾಗುತ್ತಿದೆ. ಆದಾಗ್ಯೂ, ಕೆಲವು ಮಕ್ಕಳು ವಿವಿಧ ಕಾರಣಗಳಿಂದ ಶಾಲೆಗೆ ಮರಳಲು ಹಿಂದೇಟು ಹಾಕುತ್ತಿರುವುದು ಇಲಾಖೆಗೆ ಸವಾಲಾಗಿದೆ.ದುಡಿಮೆಯತ್ತ ಮಕ್ಕಳ ಹೆಜ್ಜೆ: ಕೃಷಿ ಹಾಗೂ ಕೂಲಿ ಆಧರಿತ ಕುಟುಂಬಗಳಲ್ಲಿ ಪ್ರೌಢಶಾಲಾ ಹಂತಕ್ಕೆ ಬಂದ ಮಕ್ಕಳನ್ನು ಕುಟುಂಬದ ಆದಾಯಕ್ಕೆ ನೆರವಾಗುವಂತೆ ಕೆಲವರು ಕೆಲಸಕ್ಕೆ ಕಳುಹಿಸುತ್ತಿರುವ ಮಾಹಿತಿಯೂ ಇಲಾಖೆಗೆ ಲಭ್ಯವಾಗಿದೆ. ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕಿಂತ ಕುಟುಂಬದ ಆದಾಯಕ್ಕೆ ಆದ್ಯತೆ ನೀಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.ಇನ್ನೊಂದೆಡೆ, ಪ್ರಾಥಮಿಕ ಹಂತದಲ್ಲೇ ಓದು, ಬರಹ ಹಾಗೂ ಗಣಿತದ ಮೂಲ ಕೌಶಲ್ಯಗಳನ್ನು ಸಮರ್ಪಕವಾಗಿ ಕಲಿಯದ ಮಕ್ಕಳು ಮುಂದಿನ ತರಗತಿಗಳಲ್ಲಿ ಪಠ್ಯವನ್ನು ಅರ್ಥ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ಇದರಿಂದ ಕಲಿಕೆಯಲ್ಲಿ ಹಿನ್ನಡೆ ಉಂಟಾಗಿ, ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಸಿಯುತ್ತಿದೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ, ನಿರಂತರ ಕಲಿಕಾ ಹಿನ್ನಡೆ ಹಾಗೂ ಶಿಕ್ಷಕರೊಂದಿಗೆ ಶೈಕ್ಷಣಿಕ ಸಂಪರ್ಕದ ಕೊರತೆ ಕ್ರಮೇಣ ‘ನನಗೆ ಓದಲು ಸಾಧ್ಯವಿಲ್ಲ’ ಎಂಬ ನಕಾರಾತ್ಮಕ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸುತ್ತಿದೆ. ಕೊನೆಗೆ ಇದೇ ಮನೋಭಾವ ಶಾಲೆಯಿಂದ ದೂರ ಉಳಿಯಲು ಕಾರಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇಚ್ಛಾಶಕ್ತಿ ತೋರಿಸಬೇಕು: ಶಾಲೆಯಿಂದ ಹೊರಗುಳಿಯುವ ಮಕ್ಕಳ ಮೇಲೆ ವಿಶೇಷ ನಿಗಾ ಇಡಲಾಗಿದೆ. ಅಂತಹ ಮಕ್ಕಳನ್ನು ಪತ್ತೆಹಚ್ಚಿ ಮರಳಿ ಶಾಲೆಗೆ ಕರೆತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರು ಶಿಕ್ಷಣದ ಮಹತ್ವ ಅರಿತು, ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವ ಇಚ್ಛಾಶಕ್ತಿ ತೋರಿಸಬೇಕು ಎಂದು ಬಿಇಒ ಕಾರ್ಯಾಲಯದ ಹಾಜರಾತಿ ಅಧಿಕಾರಿ ನದೀಮ್ ಶೇಖ್ ತಿಳಿಸಿದರು.

ಪ್ರೋತ್ಸಾಹಕ ಯೋಜನೆ: ಈ ಮೊದಲು ಮಕ್ಕಳಲ್ಲಿ ಶಾಲೆ ಎಂದರೆ ಭಯ ಎಂಬ ಮನೋಭಾವವಿತ್ತು. ಆದರೆ ಪ್ರಸ್ತುತ ಅಂತಹ ವಾತಾವರಣ ಇಲ್ಲ. ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದಕ್ಕೂ ಸರ್ಕಾರ ಕಡಿವಾಣ ಹಾಕಿದೆ. ಮಕ್ಕಳನ್ನು ಶಾಲೆಯತ್ತ ಮತ್ತಷ್ಟು ಆಕರ್ಷಿಸಲು ಸರ್ಕಾರ ವಿಶೇಷ ಪ್ರೋತ್ಸಾಹಕ ಯೋಜನೆಗಳನ್ನು ಪ್ರಕಟಿಸುವ ಅಗತ್ಯವಿದೆ ಎಂದು ಮುಕುಂದ ಆನಂದು ನಾಯ್ಕ ತಿಳಿಸಿದರು.