ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ 5 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಆದ್ಯತೆ ಮೇರೆಗೆ ಮೊದಲಿಗೆ 4,400 ರಸ್ತೆ ಗುಂಡಿಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 2,200 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಲಾಗುತ್ತಿದೆಯೇ ಎಂಬುದನ್ನು ಅರಿಯಲು ಶಿವಕುಮಾರ್ ಅವರು ಸೋಮವಾರ ಮಧ್ಯರಾತ್ರಿ 12ರಿಂದ 2ಗಂಟೆವರೆಗೆ ನಗರದ ಹಲವು ರಸ್ತೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಬಾಗಲೂರು ರಸ್ತೆ, ಸಂದೀಪ್ ಉನ್ನೀಕೃಷ್ಣನ್ ರಸ್ತೆ, ಈಜಿಪುರ ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿದರು. ರಸ್ತೆ ಗುಂಡಿ ಮುಚ್ಚುವ ಸಂದರ್ಭದಲ್ಲಿ ನಿಗದಿತ ಮಾನದಂಡ ಅನುಸರಿಸಬೇಕು. ಪದೇಪದೆ ಗುಂಡಿಗಳು ಕಾಣಿಸಿಕೊಳ್ಳುವುದಕ್ಕೆ ಮುಕ್ತಿ ನೀಡಲು ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ರಸ್ತೆಗಳಲ್ಲಿ ಗುಂಡಿ ಹೆಚ್ಚಿರುವ ಕುರಿತಂತೆ ಶಾಸಕರು, ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳ ನಿಖರ ಮಾಹಿತಿ ಪಡೆಯಲು ಫಿಕ್ಸ್ ಮೈ ಸ್ಟ್ರೀಟ್ ತಂತ್ರಾಂಶ ಸಿದ್ಧಪಡಿಸಿದ್ದೇವೆ. ಅದರಲ್ಲಿ ಸಾರ್ವಜನಿಕರು ಗುಂಡಿಗಳ ಕುರಿತು ದೂರು ನೀಡುತ್ತಿದ್ದಾರೆ. ಸಾರ್ವಜನಿಕರಿಂದ ಬಂದ ಮಾಹಿತಿ ಅಧಿಕಾರಿಗಳು ಪತ್ತೆ ಮಾಡಿರುವುದು ಸೇರಿದಂತೆ ಒಟ್ಟಾರೆ ಈವರೆಗೆ 5 ಸಾವಿರಕ್ಕೂ ಹೆಚ್ಚಿನ ಗುಂಡಿಗಳು ಪತ್ತೆಯಾಗಿದ್ದು, ಅದರಲ್ಲಿ ಈಗಾಗಲೇ 2,200 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದರು.ನಗರದಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ಪಾದಚಾರಿ ಮೇಲ್ಸೇತುವೆಗಳನ್ನು ಸ್ವಚ್ಛಗೊಳಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದಷ್ಟೇ ಅಲ್ಲದೆ, ಗುಣಮಟ್ಟದ ಕೆಲಸ ಆಗಬೇಕು. ಹಾಟ್‌ಮಿಕ್ಸ್, ಕೋಲ್ಡ್‌ಮಿಕ್ಸ್ ಹಾಗೂ ಇಕೋಫಿಕ್ಸ್ ಮೂರೂ ಮಾದರಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹಮದ್ ನಯೀಮ್ ಮೊಮಿನ್ ಇದ್ದರು.ಫೇವರ್ ಯಂತ್ರದ ಮೂಲಕ
ಗುಂಡಿ ಮುಚ್ಚಿ: ಶಿವಕುಮಾರ್ಮೊದಲಿಗೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಗಲೂರು ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲಸಿದ ಡಿ.ಕೆ. ಶಿವಕುಮಾರ್, ಡಾಂಬರು ಹಾಕುವ ಫೇವರ್ ಯಂತ್ರವನ್ನು ಓಡಿಸುವ ಮೂಲಕ ಡಾಂಬರೀಕರಣ ಕಾರ್ಯ ವೀಕ್ಷಿಸಿದರು. ಇದೇ ಮಾದರಿಯಲ್ಲಿ ಬೇರೆಡೆಯುವ ಫೇವರ್ ಯಂತ್ರ ಬಳಸಿ ಗುಣಮಟ್ಟದ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸಂದೀಪ್ ಉನ್ನೀಕೃಷ್ಣನ್ ರಸ್ತೆ, ಈಜೀಪುರ ಮೇಲ್ಸೇತುವೆ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದರು. ಬಳಿಕ ಈಜಿಪುರ ಸಿಗ್ನಲ್ ಬಳಿ ಮೇಲ್ಸೇತುವೆಗೆ ಸೆಗ್ಮೆಂಟ್ ಜೋಡಣೆ ಕಾರ್ಯ ವೀಕ್ಷಿಸಿ, ಮೇಲ್ಸೇತುವೆ ಕಾಮಗಾರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ಕೂಡಲೇ ಇತ್ಯರ್ಥಗೊಳಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.