ಐದು ವರ್ಷದಲ್ಲಿ ನಾಲೆಗೆ ಬಿದ್ದು ೨೮೪ ಜನರ ಸಾವು..!

| Published : Jul 31 2025, 12:45 AM IST

ಐದು ವರ್ಷದಲ್ಲಿ ನಾಲೆಗೆ ಬಿದ್ದು ೨೮೪ ಜನರ ಸಾವು..!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಐದು ವರ್ಷದಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ನಾಲೆಗೆ ಬಿದ್ದು ೨೮೫ ಜನರು ಸಾವನ್ನಪ್ಪಿದ್ದು, ೫೪೫ ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೇಸಿಗೆ ಸಮಯದಲ್ಲಿ ಬೆಂಕಿ ಅವಘಡ ಪ್ರಕರಣಗಳು ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದರೆ, ಮಳೆಗಾಲದಲ್ಲಿ ಪ್ರವಾಹ ಹಾಗೂ ನಾಲಾ ದುರಂತ ಪ್ರಕರಣಗಳು ಎದುರಾಗುವುದು ಸರ್ವೇ ಸಾಮಾನ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಐದು ವರ್ಷದಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ನಾಲೆಗೆ ಬಿದ್ದು ೨೮೫ ಜನರು ಸಾವನ್ನಪ್ಪಿದ್ದು, ೫೪೫ ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೇಸಿಗೆ ಸಮಯದಲ್ಲಿ ಬೆಂಕಿ ಅವಘಡ ಪ್ರಕರಣಗಳು ಅಗ್ನಿಶಾಮಕ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದರೆ, ಮಳೆಗಾಲದಲ್ಲಿ ಪ್ರವಾಹ ಹಾಗೂ ನಾಲಾ ದುರಂತ ಪ್ರಕರಣಗಳು ಎದುರಾಗುವುದು ಸರ್ವೇ ಸಾಮಾನ್ಯವಾಗಿದೆ.

ಈ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ಐದು ತಿಂಗಳಲ್ಲಿ ೨೧ ಮಂದಿ ಸಾವನ್ನಪ್ಪಿದ್ದು, ೧೧ ಜನರನ್ನು ರಕ್ಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಒಟ್ಟು ೩೪ ರಕ್ಷಣಾ ಕರೆಗಳನ್ನು ಸ್ವೀಕರಿಸಲಾಗಿದೆ. ಅತಿ ಹೆಚ್ಚು ಮಂದಿ ಮಂಡ್ಯ ತಾಲೂಕಿನಲ್ಲಿ ೧೦ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ೭ ಜನರು ಸಾವನ್ನಪ್ಪಿದ್ದಾರೆ. ನಾಗಮಂಗಲ ತಾಲೂಕಿನಲ್ಲಿ ಸಾವಿನ ಸಂಖ್ಯೆ ವರದಿಯಾಗಿಲ್ಲ.

ಇದರ ಜೊತೆಯಲ್ಲೇ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ೧೯ ಜಾನುವಾರುಗಳು ಸಾವನ್ನಪ್ಪಿದ್ದು, ೭೯ ಜಾನುವಾರುಗಳನ್ನು ರಕ್ಷಣೆ ಮಾಡಿರುವುದಾಗಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳಲ್ಲಿ ದಾಖಲಾಗಿದೆ.

ಸಣ್ಣ ಪ್ರಮಾಣದಿಂದ ಹಿಡಿದು ದೊಡ್ಡ ಪ್ರಮಾಣದ ನಾಲಾ ದುರಂತ ಪ್ರಕರಣಗಳು ಘಟಿಸಿದರೂ ಅಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಜರಿರಲೇಬೇಕು. ಹಲವೆಡೆ ನಾಲಾ ತಡೆಗೋಡೆಗಳಿಲ್ಲವೆ ವಾಹನಗಳು ನೀರಿಗೆ ಬಿದ್ದು ಜನರು ಸಾವನ್ನಪ್ಪಿದ್ದಾರೆ. ಹಲವರು ನಾಲೆಗೆ ಹಾರಿ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಕೆಲವರು ಈಜಲು ನಾಲೆಗೆ ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹಾಗೂ ಸೆಲ್ಫೀ ಗೀಳಿಗೆ ಬಲಿಯಾಗಿ ಅನೇಕ ಯುವಕ-ಯುವತಿಯರು ನೀರು ಪಾಲಾಗಿರುವ ಘಟನೆಗಳೂ ಸಂಭವಿಸಿವೆ.

ಈ ಸಮಯದಲ್ಲೆಲ್ಲಾ ಶವಗಳಿಗಾಗಿ ಶೋಧ ನಡೆಸುವವರು ಹಾಗೂ ನಾಲೆಯೊಳಗಿನಿಂದ ವಾಹನಗಳನ್ನು ಮೇಲಕ್ಕೆತ್ತುವ, ಶವಗಳಿಗಾಗಿ ಹುಡುಕಾಟ ನಡೆಸುವ ಕಾರ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿಯೇ ನಡೆಸುತ್ತಿದ್ದಾರೆ. ಪ್ರವಾಹಗಳು ಎದುರಾದ ಸಮಯದಲ್ಲೂ ತುರ್ತು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿ ಅಪಾಯದಲ್ಲಿರುವವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗುವರು.

ಜಿಲ್ಲೆಯಲ್ಲಿ ಸುಮಾರು ೩೬೦ ಕಿ.ಮೀ. ದೂರದವರೆಗೆ ನಾಲೆ ಹಾದುಹೋಗಿದ್ದು, ಬಹುತೇಕ ಕಡೆ ತಡೆಗೋಡೆಗಳನ್ನು ನಿರ್ಮಿಸದಿರುವುದರಿಂದ ನಾಲೆಗಳೊಳಗೆ ವಾಹನಗಳು ಬಿದ್ದು ಸಾವು-ನೋವು ಸಂಭವಿಸುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ನಾಲೆಗೆ ವಾಹನಗಳ ಸಹಿತ ಉರುಳಿಬಿದ್ದವರ ರಕ್ಷಣೆ ಮಾಡಲಾಗದಿದ್ದರೂ, ಪ್ರವಾಹ ಹಾಗೂ ಬೆಂಕಿ ಅವಘಡಗಳು ಸಂಭವಿಸಿದ ಸಮಯದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿದ್ದಾರೆ.

ಜಿಲ್ಲೆಯ ಯಾವುದೇ ಭಾಗದಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೂ, ನಾಲೆಗಳಿಗೆ ವಾಹನಗಳು ಉರುಳಿದರೂ ರಕ್ಷಣೆಗಾಗಿ ಮೊದಲು ಅಗ್ನಿ ಶಾಮಕ ಠಾಣೆಗೆ ಕರೆ ಬರುತ್ತದೆ. ಬೇಸಿಗೆ ಸಮಯದಲ್ಲಿ ಸದಾಕಾಲ ವಾಹನಗಳಿಗೆ ನೀರು ತುಂಬಿಸಿಕೊಂಡು ಸಿಬ್ಬಂದಿಯೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧವಾಗಿ ನಿಂತಿದ್ದರೆ, ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಯಾದಾಗ ರಕ್ಷಣಾ ಜಾಕೆಟ್, ಬೋಟ್, ಹಗ್ಗ ಸೇರಿದಂತೆ ಇನ್ನಿತರ ಸುರಕ್ಷತಾ ಸಾಮಗ್ರಿಗಳೊಂದಿಗೆ ಸಂಕಷ್ಟಕ್ಕೆ ಸಿಲುಕಿದ ಜನರು ಹಾಗೂ ಜಾನುವಾರುಗಳ ರಕ್ಷಣೆ ಮಾಡುವುದಕ್ಕೆ ಮುಂದಾಗುವರು.

ಇಲಾಖೆಯಲ್ಲಿ ಸಿಬ್ಬಂದಿಗಿಂತ ವಾಹನಗಳ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಬೇಡಿಕೆಯಿರುವಷ್ಟು ಸಿಬ್ಬಂದಿ ಇದ್ದಾರೆ. ಆದರೆ, ವಾಹನಗಳ ಕೊರತೆ ಬಹಳವಾಗಿ ಕಾಡುತ್ತಿದೆ. ಕಿರು ಹಾಗೂ ಕ್ಷಿಪ್ರ ರಕ್ಷಣಾ ವಾಹನಗಳು ಪ್ರತಿ ತಾಲೂಕುಗಳಲ್ಲಿ ಇರುವಂತಾದರೆ ಸಂಭವಿಸಬಹುದಾದ ಜನ-ಜಾನುವಾರುಗಳ ಸಾವು-ನೋವುಗಳನ್ನು ತಪ್ಪಿಸಬಹುದಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ನಿತ್ಯವೂ ಒಂದಲ್ಲಾ ಒಂದು ಕಡೆಯಿಂದ ದೂರವಾಣಿ ಕರೆಗಳು ಬರುತ್ತಲೇ ಇರುತ್ತವೆ. ಅವೆಲ್ಲವನ್ನೂ ಸಮಾಧಾನಚಿತ್ತದಿಂದ ಸ್ವೀಕರಿಸಿ ಅವುಗಳಿಗೆ ಸ್ಪಂದಿಸಲಾಗುತ್ತಿದೆ. ಸದಾ ಜೀವರಕ್ಷಣೆ ಮತ್ತು ಸಾರ್ವಜನಿಕರ ಆಸ್ತಿ ರಕ್ಷಣಾ ಕಾರ್ಯಕ್ಕೆ ಅಗ್ನಿಶಾಮಕ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಟೊಂಕಕಟ್ಟಿ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ.

ವರ್ಷ ಕರೆಗಳು ರಕ್ಷಣೆ ಸಾವು ಜಾನುವಾರು ಸಾವು

೨೦೨೦೫೨೧೧೩೩೦೯೦೩

೨೦೨೧೬೭೭೪೩೫೦೯೦೮

೨೦೨೨೧೦೮೩೮೭೪೯೩೫೦೩

೨೦೨೩೧೦೬೩೪೭೭೧೦೦೧

೨೦೨೪೯೬೨೮೬೯೧೬೦೩

೨೦೨೫೩೪೧೧೨೧೦೦೦೧

ಒಟ್ಟು೪೬೩೫೪೫೨೮೪೭೯೧೯ಬೇಸಿಗೆ ಸಮಯದಲ್ಲಿ ಬೆಂಕಿ ಅವಘಡಗಳು ಹೆಚ್ಚಾಗಿದ್ದರೆ, ಮಳೆಗಾಲದಲ್ಲಿ ಪ್ರವಾಹ, ನಾಲಾ ದುರಂತ ಪ್ರಕರಣಗಳಲ್ಲಿ ಜನ-ಜಾನುವಾರುಗಳ ಪ್ರಾಣ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಅಗತ್ಯ ಸಿಬ್ಬಂದಿಯೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

- ಬಿ.ಎಂ.ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ