ಕನ್ನಡಪ್ರಭವಾರ್ತೆ, ತುರುವೇಕೆರೆ
ತಾಲೂಕಿನ ಹೈನುಗಾರರಿಗೆ ವಿವಿಧ ಯೋಜನೆಯಡಿ ಸುಮಾರು 29.40 ಲಕ್ಷ ರು.ಗಳ ಪರಿಹಾರವನ್ನು ಕೆ ಎಂ ಎಫ್ ನ ನಿರ್ದೇಶಕ ಹಾಗೂ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಿತರಿಸಿದರು.ಈ ವೇಳೆ ಮಾತನಾಡಿದ ಸಿ.ವಿ.ಮಹಲಿಂಗಯ್ಯ ಜಿಲ್ಲಾ ಹಾಲು ಒಕ್ಕೂಟದಿಂದ ರಾಸುಗಳಿಗೆ ಉಚಿತವಾಗಿ ವಿಮೆ ಮಾಡಿಸಲಾಗುತ್ತಿದೆ. ಮೃತಪಟ್ಟ ರಾಸು ಜೀವಂತವಾಗಿದ್ದ ವೇಳೆ ಅದು ನೀಡುತ್ತಿದ್ದ ಹಾಲಿನ ಪ್ರಮಾಣದ ಮೇಲೆ ವಿಮೆ ಹಣ ನಿಗದಿ ಮಾಡಲಾಗುವುದು. ಕನಿಷ್ಠ 40 ಸಾವಿರದಿಂದ 70 ಸಾವಿರದವರೆಗೆ ವಿಮೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿ 2 ಲಕ್ಷ ರಾಸುಗಳಿಗೆ ವಿಮೆ ಮಾಡಿಸಲಾಗಿದೆ. ಮೃತಪಟ್ಟ ರಾಸುಗಳ ಮಾಲೀಕರಿಗೆ ವಿಮೆ ಹಣವನ್ನು ನೀಡಲಾಗುತ್ತಿದೆ. ಈ ಹಣದಲ್ಲೇ ಮತ್ತೊಂದು ಹಸು ತಂದು ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹೇಳಿದರು. ದ್ವಾರನಹಳ್ಳಿ ಮತ್ತು ಹಡವನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ದುರಸ್ಥಿಗಾಗಿ ಎರಡನೇ ಕಂತಾಗಿ ತಲಾ 75 ಸಾವಿರದಂತೆ 1.50 ಲಕ್ಷ ರುಗಳನ್ನು, ಕಲ್ಲುನಾಗತಿಹಳ್ಳಿಯ ಕಟ್ಟಡ ನಿರ್ಮಾಣದ ಮೊದಲ ಕಂತಾಗಿ 3 ಲಕ್ಷ ರುಗಳನ್ನು ನೀಡಲಾಯಿತು. ಈ ವೇಳೆ ತಾಲೂಕು ವಿಸ್ತೀರಣಾಧಿಕಾರಿ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್, ಸುನಿಲ್, ಜಿಲ್ಲಾ ಹಾಲು ಸಹಕಾರ ಸಂಘದ ನೌಕರರ ಸಂಘದ ಸಂಚಾಲಕ ಹಡವನಹಳ್ಳಿ ಪುಟ್ಟಣ್ಣ, ದ್ವಾರನಹಳ್ಳಿ, ಕಲ್ಲುನಾಗತಿಹಳ್ಳಿ, ಒಬ್ಬೆನಾಗಸಂದ್ರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ವಿಮಾ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.