ಸಾರಾಂಶ
ಹಳಿಯಾಳ; ಬಾಂದಾರು ನಿರ್ಮಾಣ, ಕಾಲುವೆ ಕಾಮಗಾರಿ, ಏತ ನೀರಾವರಿ, ರಸ್ತೆ ಕಾಮಗಾರಿ, ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಗೋಶಾಲಾ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹29.35 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಭಾನುವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಂಜೂರಾದ ಅನುದಾನದಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳ ಆಡಳಿತಾತ್ಮಕ ಪ್ರಕ್ರಿಯೆ ಬೇಗನೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ನಡೆಸಲು ಸೂಚಿಸಲಾಗಿದೆ ಎಂದರು.ಚಿಕ್ಕ ನೀರಾವರಿ ಇಲಾಖೆಯ ವಿವಿಧ 10 ಅಭಿವೃದ್ಧಿ ಕಾಮಗಾರಿಗಳಿಗೆ ₹17 ಕೋಟಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು. ಜನಗಾ ಕ್ರಾಸ್ ಮೇಲ್ಭಾಗದಲ್ಲಿ ಬಾಂದಾರ್ ನಿರ್ಮಾಣಕ್ಕೆ ₹1 ಕೋಟಿ, ವಾಟ್ನಾಳ್ ಕ್ರಾಸ್ ಕೆಳಭಾಗದ ಮಿರಾಶಿ ಹೊಲದ ಹತ್ತಿರ ಬಾಂದಾರ ನಿರ್ಮಾಣಕ್ಕೆ ₹2 ಕೋಟಿ, ಸಂಕನಕೊಪ್ಪ ಹತ್ತಿರ ಮಂಗಳಿ ಹಳ್ಳಕ್ಕೆ ಬಾಂದಾರ್ ನಿರ್ಮಾಣಕ್ಕೆ ₹1 ಕೋಟಿ, ಜೋಯಿಡಾ ತಾಲೂಕಿನ ಮಾರಸಂಗಳ ಹತ್ತಿರ ಬಿಸಿಬಿ ನಿರ್ಮಾಣಕ್ಕೆ ₹2 ಕೋಟಿ, ಹಳಿಯಾಳದ ಬಾಮನಿಕೊಪ್ಪ ಹತ್ತಿರದ ಏತ ನೀರಾವರಿ ಯೋಜನೆ ಪುನುರುಜ್ಜೀವನ ಕಾಮಗಾರಿಗೆ ₹6 ಕೋಟಿ, ದುರ್ಗದಹಳ್ಳ ಕೆರೆಯ ಕಾಲುವೆಗೆ ತಡೆಗೊಡೆ ನಿರ್ಮಾಣಕ್ಕೆ ₹1 ಕೋಟಿ, ಹಾರವಳ್ಳಿ ಕೆರೆಯ ಕಾಲುವೆಗೆ ₹1 ಕೋಟಿ, ಕಾವಲವಾಡ ಕೆರೆ ಕಾಲುವೆಗೆ ತಡೆಗೋಡೆ ಸಹಿತ ಕಾಲುವೆ ನಿರ್ಮಾಣ ಕಾಮಗಾರಿಗೆ ₹1 ಕೋಟಿ, ಅಂಬಡಗಾ ಕೆರೆ ಸುಧಾರಣೆಗೆ ₹2 ಕೋಟಿ ಅನುದಾನ ಮಂಜೂರಾಗಿದೆ ಎಂದರು.
ತಾಲೂಕಿನಲ್ಲಿ ನೀರಾವರಿ ಕಾಮಗಾರಿಗಾಗಿ ಪೈಪ್ ಅಳವಡಿಸುವಾಗ ಹಾಳಾದ ಹವಗಿ ಗ್ರಾಮದಿಂದ ವಿವೇಕ ಪ್ರಗತಿ ರಸ್ತೆ ಕಾಮಗಾರಿಗೆ ನೀರಾವರಿ ನಿಗಮದಿಂದ ₹2.10 ಕೋಟಿ ಮಂಜೂರಾಗಿದೆ. ಭಾಗವತಿ ಗ್ರಾಮದ ಸೂರ್ಯಚಂದ್ರವಾಡಾ, ಬಾಳಶೆಟ್ಟಿಕೊಪ್ಪ ಮಧ್ಯೆ ಇರುವ ಸೇತುವೆ ನಿರ್ಮಾಣಕ್ಕಾಗಿ ₹1 ಕೋಟಿ ಮಂಜೂರಾಗಿದೆ. ಜಿಲ್ಲಾ ಖನಿಜ ನಿಧಿಯಿಂದ ₹1.50 ಕೋಟಿ ಅನುದಾನ ಮಂಜೂರಾಗಿದೆ. ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ಗಣಿಬಾಧಿತ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದರು.ದಾಂಡೇಲಿಯಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ಶಾಲೆಯ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕಾಗಿ ₹6.75 ಕೋಟಿ ಮಂಜೂರಾಗಿದೆ ಎಂದರು.
ದುಸಗಿ ಗ್ರಾಮದಲ್ಲಿರುವ ಜಿಲ್ಲಾ ಗೋಶಾಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹1 ಕೋಟಿ ಮಂಜೂರಾಗಿದೆ. ಇದರಲ್ಲಿ ಜಾನುವಾರು ಕಟ್ಟಲು ಮೈದಾನ ನಿರ್ಮಾಣ, ಗೋದಾಮು ನಿರ್ಮಾಣ, ಕಾರ್ಮಿಕರ ವಸತಿ ಗೃಹ ನಿರ್ಮಾಣ ಮತ್ತು ತಂತಿಬೇಲಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದೆಂದು ತಿಳಿಸಿದರು. ಗೋಶಾಲೆಯಲ್ಲಿ 150ಕ್ಕೂ ಹೆಚ್ಚು ಜಾನುವಾರಗಳಿದ್ದು, ಜಾನುವಾರುಗಳನ್ನು ಸಾಕಲು ಆಸಕ್ತರು ಬಯಸಿದಲ್ಲಿ ಅವರಿಗೆ ಜಾನುವಾರುಗಳನ್ನು ನೀಡಲು ಅನುವು ಮಾಡಿಕೊಡುವಂತೆ ಪಶು ಸಂಗೋಪನಾ ಸಚಿವರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ 6 ಫಲಾನುಭವಿಗಳಿಗೆ ಪರಿಹಾರ ಮಂಜೂರಾಗಿದೆ. ಇತ್ತೀಚೆಗಷ್ಟೇ ಕೆರೆಯಲ್ಲಿ ಮುಳಗಿ ಮೃತಪಟ್ಟ ಬಾಲಕ ಬೇಪಾರಿ ಕುಟುಂಬಕ್ಕೆ ವಿಶೇಷ ಪ್ರಕರಣದಡಿ ₹2 ಲಕ್ಷ ಮಂಜೂರಾಗಿದೆ ಎಂದು ದೇಶಪಾಂಡೆ ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಗಳಲ್ಲಿ ಗ್ರಾಮದಿಂದ ಹಿಡಿದು ಪಟ್ಟಣದವರೆಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಅಭಿಯಾನದ ದಿನ ನಿಗದಿಪಡಿಸಲಾಗುವುದು. ಸ್ವಚ್ಛತಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು.ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪ್ರಮುಖರಾದ ಉಮೇಶ ಬೊಳಶೆಟ್ಟಿ, ಎಚ್.ಬಿ. ಪರಶುರಾಮ, ಎಸ್.ಜಿ.ಮಾನಗೆ ಇದ್ದರು.