ಸಾರಾಂಶ
ಬೆಂಗಳೂರಿನಲ್ಲಿ 11 ಮಾರ್ಗಗಳಲ್ಲಿ ಬಸ್ ಆದ್ಯತಾ ಪಥ ಸ್ಥಾಪಿಸಬೇಕು ಹಾಗೂ ಹೊರವರ್ತುಲ ರಸ್ತೆಯಲ್ಲಿ ಇದ್ದ ಬಸ್ ಆದ್ಯತಾ ಪಥವನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ 29 ಸಾವಿರ ಸಾರ್ವಜನಿಕರ ಸಹಿವುಳ್ಳ ಮನವಿ ಪತ್ರವನ್ನು ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ (ಡಲ್ಟ್) ಸಲ್ಲಿಸಿದೆ.
ಬೆಂಗಳೂರು : ಸಮಗ್ರ ಸಂಚಾರ ಯೋಜನೆಯಲ್ಲಿ (ಸಿಎಂಪಿ) ಪ್ರಸ್ತಾಪಿಸಿದಂತೆ ಬೆಂಗಳೂರಿನಲ್ಲಿ 11 ಮಾರ್ಗಗಳಲ್ಲಿ ಬಸ್ ಆದ್ಯತಾ ಪಥ ಸ್ಥಾಪಿಸಬೇಕು ಹಾಗೂ ಹೊರವರ್ತುಲ ರಸ್ತೆಯಲ್ಲಿ ಇದ್ದ ಬಸ್ ಆದ್ಯತಾ ಪಥವನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು 29 ಸಾವಿರ ಸಾರ್ವಜನಿಕರ ಸಹಿವುಳ್ಳ ಮನವಿ ಪತ್ರವನ್ನು ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ (ಡಲ್ಟ್) ಸಲ್ಲಿಸಿದೆ.
ನಗರದಲ್ಲಿನ ಸಂಚಾರ ದಟ್ಟಣೆ ನಿಯಂತ್ರಣ ಸೇರಿದಂತೆ ಇನ್ನಿತರ ಸಮಸ್ಯೆ ಪರಿಹರಿಸಲು ಡಲ್ಟ್ ಸಿದ್ಧಪಡಿಸಿದ್ದ ಸಮಗ್ರ ಸಂಚಾರ ಯೋಜನೆಯಲ್ಲಿ 11 ಮಾರ್ಗಗಳಲ್ಲಿ ಬಸ್ ಆದ್ಯತಾ ಪಥ ಸ್ಥಾಪಿಸುವ ಕುರಿತು ಪ್ರಸ್ತಾಪಿಸಲಾಗಿತ್ತು. ಅದರಂತೆ ಹೊರವರ್ತುಲ ರಸ್ತೆಯ ಕೆಆರ್ ಪುರ, ಟಿನ್ ಫ್ಯಾಕ್ಟರಿಯಿಂದ ಸಿಲ್ಕ್‌ಬೋರ್ಡ್‌ವರೆಗೆ ಸ್ಥಾಪಿಸಿದ್ದ ಬಸ್ ಆದ್ಯತಾ ಪಥ ಸ್ಥಗಿತಗೊಂಡಿದೆ.
ಇದೀಗ ಸಮಗ್ರ ಸಂಚಾರ ಯೋಜನೆಯಲ್ಲಿ ಪ್ರಸ್ತಾಪಿಸಿದಂತೆ ಹೊರವರ್ತುಲ ರಸ್ತೆ ಸೇರಿದಂತೆ 11 ಕಡೆಗಳಲ್ಲಿ ಬಸ್ ಆದ್ಯತಾ ಪಥ ಸ್ಥಾಪಿಸುವಂತೆ ಗಾರ್ಮೆಂಟ್ಸ್ ನೌಕರರು ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಕೆಲಸ ಮಾಡುವ 28,995 ಮಂದಿಯಿಂದ ಗ್ರೀನ್‌ಪೀಸ್ ಇಂಡಿಯಾ ಸಹಿ ಸಂಗ್ರಹಿಸಿ ಡಲ್ಟ್‌ಗೆ ಸಲ್ಲಿಸಿದೆ. ಬಸ್ ಆದ್ಯತಾ ಪಥದ ಜತೆಗೆ 15 ಸಾವಿರ ಬಸ್‌ಗಳ ಮೂಲಕ ನಗರದ ಎಲ್ಲ ಭಾಗಗಳಿಗೂ ಬಸ್‌ಗಳು ಸಂಚರಿಸಬೇಕು ಎಂಬುದು ಸೇರಿದಂತೆ ಸುವ್ಯವಸ್ಥಿತ, ಸುರಕ್ಷಿತ ಮತ್ತು ಉತ್ತಮ ಸಂಪರ್ಕ ಸಾರಿಗೆ ಸೇವೆ ನೀಡುವ ಕುರಿತ ಬೇಡಿಕೆಗಳ ಪಟ್ಟಿಯನ್ನು ಡಲ್ಟ್‌ಗೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರೀನ್‌ಪೀಸ್ ಇಂಡಿಯಾದ ಕ್ಯಾಂಪೇನರ್ ಎಂ.ಎಸ್.ಶರತ್, ಪ್ರತ್ಯೇಕ ಬಸ್ ಪಥದಿಂದಾಗಿ ಸಾರ್ವಜನಿಕ ಬಸ್ ಸೇವೆ ಮತ್ತಷ್ಟು ಉತ್ತಮವಾಗಲಿದೆ. ಸಂಚಾರ ದಟ್ಟಣೆ ನಿವಾರಣೆ ಮತ್ತು ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಲಿದೆ. ಬಿಎಂಟಿಸಿಯಲ್ಲಿನ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ತಿಳಿಸಿದರು.