ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ 2912 ಕಿಮಿ ಫೈರ್‌ ಲೈನ್ !

| Published : Jan 08 2025, 12:19 AM IST / Updated: Jan 08 2025, 12:13 PM IST

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ 2912 ಕಿಮಿ ಫೈರ್‌ ಲೈನ್ !
Share this Article
  • FB
  • TW
  • Linkdin
  • Email

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಫೈರ್‌ಲೈನ್‌ ಮಾಡುವ ಮುನ್ನ ಗಿಡ ಗಂಟಿಗಳಿಗೆ ಬೆಂಕಿ ಹಾಕಿರುವುದು.

 ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ಬಂಡೀಪುರ ಸಂರಕ್ಷಿತ ಪ್ರದೇಶದಲ್ಲಿ 2650 ಮೀಟರ್ ಫೈರ್‌ಲೈನ್ ಮಾಡಿದ್ದು ಬೆಂಕಿ ತಡೆಗೆ ಬಂಡೀಪುರ ಅರಣ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ.

ಬಂಡೀಪುರ ಸಂರಕ್ಷಿತ ಪ್ರದೇಶದೊಳಗೆ ರಾಷ್ಟ್ರೀಯ ಹೆದ್ದಾರಿ, ಸೂಕ್ಷ್ಮ ಪ್ರದೇಶ, ಟೈಗರ್ ಹಾಗೂ ವಾಟರ್ ರಸ್ತೆಗಳಲ್ಲಿ ಬೆಂಕಿ ತಡೆಗೆ ಬಂಡೀಪುರದ 13 ವಲಯಗಳಲ್ಲಿ ಫೈರ್‌ಲೈನ್ ಕೆಲಸ ಆರಂಭವಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿ, ಟೈಗರ್ ಹಾಗೂ ವಾಟರ್ ರಸ್ತೆಗಳಲ್ಲಿ 10 ರಿಂದ 20 ಮೀಟರ್ ತನಕ ಫೈರ್‌ಲೈನ್ ಮಾಡಿದ್ದಾರೆ. ಈ ಬಾರಿ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಎಲ್ಲ ಮುಂಜಾಗೃತ ಕ್ರಮವಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಫೈರ್‌ಲೈನ್ ಮಾಡಿದ್ದು, ಈಗ ಹೆದ್ದಾರಿಯಲ್ಲಿ ಹಗಲು ರಾತ್ರಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ಮೈಸೂರು-ಊಟಿ ಹಾಗೂ ಮೈಸೂರು-ಕೇರಳ ಹೆದ್ದಾರಿಗಳಿವೆ. ಈ ಹೆದ್ದಾರಿ ಬದಿಯಲ್ಲಿ ಜಂಗಲ್ ಕಟಿಂಗ್ ಆದ ಬಳಿಕ ಅರಣ್ಯ ಇಲಾಖೆಯೇ ಬೆಂಕಿ ಹಾಕಿ ಗಿಡ ಗಂಟಿಗಳನ್ನು ಸುಟ್ಟು ಹಾಕಿದ್ದಾರೆ. ಹೆದ್ದಾರಿ ಮಾತ್ರವಲ್ಲದೆ ಅರಣ್ಯ ವಲಯಗಳಲ್ಲಿ ವಾಹನಗಳು ಸಂಚರಿಸುವ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಫೈರ್‌ಲೈನ್ ಆಗಿದ್ದು, ಫೈರ್‌ ಲೈನ್‌ ಕೆಲಸ ಶೇ.80 ರಷ್ಟು ನಡೆದಿದೆ.

450 ಫೈರ್ ವಾಚರ್:ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ 450 ಫೈರ್ ವಾಚರ್‌ಗಳ ನೇಮಕ ಈ ತಿಂಗಳ ಅಂತ್ಯದೊಳಗೆ ಆಗಲಿದೆ. 13 ವಲಯಗಳಲ್ಲಿ ಒಂದು ಅಥವಾ ಎರಡು ಹೆಚ್ಚುವರಿ ಜೀಪು ನೀಡಲಾಗಿದೆ. ಎಲ್ಲ ವಲಯಗಳಲ್ಲಿ ಎರಡು ವಾಚ್ ಟವರ್‌ಗಳಿದ್ದು, ವಾಚ್‌ ಟವರ್‌ ಇಲ್ಲದ ಕಡೆಗಳಲ್ಲಿ ಮಚ್ಚಾನ್‌ ನಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ತನಕ ಹದ್ದಿನ ಕಣ್ಣು ಇಟ್ಟಿದ್ದಾರೆ. ಬೆಂಕಿ ನಂದಿಸುವ ಬ್ಲೋಯರ್ಸ್‌, ಸ್ಪೇ ಯರ್ಸ್‌, ಫೈರ್‌ ಬೇಯರ್ಸ್‌ ಪರಿಶೀಲನೆ ನಡೆಸಿ ಸಣ್ಣ ಪುಟ್ಟ ದುರಸ್ತಿ ಕೆಲಸ ಆಗಿದೆ. ಅರಣ್ಯ ಸಿಬ್ಬಂದಿ, ಫೈರ್ ವಾಚರ್ ಜೊತೆಗೆ ವಿಶೇಷ ಹುಲಿ ಸಂರಕ್ಷಣ ಪಡೆಯ ಸಿಬ್ಬಂದಿ ಕಾಡಿನ ಅಗತ್ಯ ಸ್ಥಳಗಳಲ್ಲಿ ಗಸ್ತು ನಡೆಸುತ್ತಿದ್ದಾರೆ. ಈ ಬಾರಿ 2912 ಕಿಮೀ ಫೈರ್ ಲೈನ್‌ ನಿರ್ಮಿಸಲಾಗುತ್ತಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಲ್ಲಿ ಬೆಂಕಿ ತಡೆಗೆ ಎಲ್ಲಾ ಸರ್ವ ಪ್ರಯತ್ನ ಹಾಗೂ ಮುಂಜಾಗೃತ ಕ್ರಮಗಳನ್ನು ಅರಣ್ಯ ಇಲಾಖೆ ತಗೆದುಕೊಂಡಿದೆ. ಫೈರ್ ತಡೆ ಸಂಬಂಧ ಜಂಗಲ್ ಕಟಿಂಗ್ ಹಾಗೂ ಬರ್ನ್ ಮಾಡುವ ಕೆಲಸ ಶೇ.80ರಷ್ಟು ಮುಗಿದಿದೆ. ಇನ್ನೇನಿದ್ದರೂ ಬೇಸಿಗೆ ಮುಗಿವ ತನಕ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಫೈರ್ ವಾಚರ್ ಹಗಲು ರಾತ್ರಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಡ್ರೋನ್‌ ಬಳಕೆ:

ಬೇಸಿಗೆ ಆರಂಭದ ಹಿನ್ನೆಲೆ ಕಾಡಿನ ಪ್ರಮುಖ ಸ್ಥಳ ಹಾಗೂ ಹೆದ್ದಾರಿಯಲ್ಲಿ ಡ್ರೋಣ್‌ ಮೂಲಕ ಕಿಡಿಗೇಡಿಗಳ ಚಲನ, ವಲನಗಳ ಮೇಲೆ ನಿಗಾ ಇಡಲಾಗಿದೆ. ಅಗ್ನಿಶಾಮಕ ದಳಕ್ಕೆ ಪತ್ರ ಕೂಡ ಬರೆಯಲಾಗಿದೆ. ಗುಂಡ್ಲುಪೇಟೆ ಹಾಗೂ ಬಂಡೀಪುರ ಉಪ ವಿಭಾಗದ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದರು.

ಬೋರ್‌ ವೆಲ್‌ ದುರಸ್ತಿ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಸೋಲಾರ್‌ ಬೋರ್‌ವೆಲ್‌ಗಳ ತಪಾಸಣೆ ನಡೆಸಿದ್ದು, ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಆರ್‌ಎಫ್‌ಒಗಳಿಗೆ ಹೇಳಲಾಗಿದೆ. ಕೆರೆ ಕಟ್ಟೆಗಳಲ್ಲಿ ನೀರಿದ್ದರೆ ವನ್ಯಜೀವಿಗಳಿಗೂ ಅನುಕೂಲವಾಗಲಿದೆ ಎಂದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಎಲ್ಲ ಮುಂಜಾಗೃತ ಕ್ರಮ ತೆಗೆದುಕೊಂಡಿದೆ. ಕಾಡಂಚಿನ ಗ್ರಾಮಗಳ ರೈತರು ಜಮೀನಿನಲ್ಲಿ ಬೆಂಕಿ ಹಾಕುವಾಗ ಮುನ್ನಚ್ಚರಿಕೆ ಇರಲಿ. ಕಾಡು ಹಾಗೂ ಪ್ರಾಣಿಗಳ ಸಂರಕ್ಷಣೆಗೆ ರೈತರು, ಸಾರ್ವಜನಿಕರ ಸಹಕಾರ ಇಲಾಖೆ ಮೇಲಿರಲಿ.-ಎಸ್.ಪ್ರಭಾಕರನ್‌, ಸಿಎಫ್‌, ಬಂಡೀಪುರ