ಸಾರಾಂಶ
2ಎ ಮೀಸಲಾತಿ ಬೇಡಿಕೆ ಸ್ವಾಭಿಮಾನದ ಹೋರಾಟ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಸ್ವಾಭಿಮಾನದ ಹೋರಾಟವಾಗಿದೆ. ನಿಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜ.12ರಂದು ಮೋಟೆಬೆನ್ನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಸಾಮೂಹಿಕ ಇಷ್ಟಲಿಂಗ ಪೂಜೆ, ಪ್ರತಿಭಟನೆಗೆ ಸಾಗರೋಪಾದಿಯಲ್ಲಿ ಬರುವಂತೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಕರೆ ನೀಡಿದರು.ಮೋಟೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ ಇಂದು ತಮ್ಮ ಸಮಾಜದ ಮಕ್ಕಳಿಗೆ 2ಎ ಮೀಸಲಾತಿಗೆ ಬೀದಿಗಿಳಿದೆ. ಶೇ.95ರಷ್ಟು ಅಂಕ ಪಡೆದರೂ ಸರ್ಕಾರಿ ಉದ್ಯೋಗ ಪಡೆಯಲು ಪಂಚಮಸಾಲಿ ಕುಟುಂಬದ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಶೋಷಿತರು, ಬಡವರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನದಲ್ಲೇ ಅವಕಾಶವಿದೆ. ಹೀಗಾಗಿ 2ಎ ಮೀಸಲಾತಿಗೆ ಹೋರಾಟ ಅನಿವಾರ್ಯವಾಗಿದೆ ಎಂದರು.
ಎರಡನೇ ಹಂತದ ಹೋರಾಟದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟನೆ ಮಾಡಲಿದ್ದೇವೆ. ಮೋಟೆಬೆನ್ನೂರ ಗ್ರಾಮದಲ್ಲಿನ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ಅಯ್ಯಪ್ಪ ಸ್ವಾಮಿ ಸನ್ನಿಧಿಯ ಜಾಗದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಸಿ.ಆರ್. ಬಳ್ಳಾರಿ, ತಿರಕಪ್ಪ ಮರಬಸಣ್ಣನವರ, ಶಿವಬಸಪ್ಪ ಕುಳೇನೂರ, ವಿಜಯಭರತ ಬಳ್ಳಾರಿ, ಪುಟ್ಟನಗೌಡ ಪಾಟೀಲ, ವಿಜಯ ಸವಣೂರ, ಜಯಪ್ಪ ಚಂದ್ರಪ್ಪನವರ, ಬಸವರಾಜ ಬಳ್ಳಾರಿ, ನಿಂಗಪ್ಪ ಅಂಗಡಿ, ಹಾಲೇಶಪ್ಪ ಬ್ಯಾಡಗಿ, ಪರಮೇಶಪ್ಪ ಮೈಲಾರ, ಮಲ್ಲಿಕಾರ್ಜುನ ಬಳ್ಳಾರಿ, ಈರಣ್ಣ ಬಳ್ಳಾರಿ ಇದ್ದರು.