೨ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್

| Published : Dec 13 2024, 12:47 AM IST

ಸಾರಾಂಶ

ಚಾಮರಾಜನಗರದಲ್ಲಿ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿದರು, ಇಂದ್ರೇಶ್, ಎನ್‌ರಿಚ್ ಮಹದೇವಸ್ವಾಮಿ, ಎಂ.ಮಂಜೇಶ್, ಗುರುಸ್ವಾಮಿ, ಬಾಲಚಂದ್ರಮೂರ್ತಿ, ಜಿ.ಎಂ. ಮಹದೇವಸ್ವಾಮಿ ಇದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗೌಡ ಲಿಂಗಾಯಿತ, ಪಂಚಮಸಾಲಿ ಲಿಂಗಾಯತರಿಗೆ ೨ಎ ಮೀಸಲಾತಿ ನೀಡಬೇಕು, ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಡಿ.೧೦ರಂದು ಬೆಳಗಾವಿಯ ಸುವರ್ಣಸೌಧದ ಬಳಿ ಹೋರಾಟ ಮಾಡುತ್ತಿದ್ದ ಲಿಂಗಾಯಿತರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ತೀವ್ರ ಖಂಡನೀಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೨ ವರ್ಷಗಳಿಂದ 2ಎ ಮೀಸಲಾತಿ, ಒಬಿಸಿ ಪಟ್ಟಿಗಾಗಿ ಬಸವ ಜಯಮೃತ್ಯಂಜಯ ಸ್ವಾಮೀಜಿ ಹೋರಾಟ ಮಾಡುತ್ತಾ ಬಂದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖಂಡನೀಯ ಎಂದರು. ಉದ್ದೇಶಪೂರ್ವಕವಾಗಿಯೇ ಸರ್ಕಾರ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಮಾಡಿದೆ, ಮಫ್ತಿಯಲ್ಲಿದ್ದ ಪೊಲೀಸರೇ ಹೋರಾಟಗಾರರ ಮೇಲೆ ಕಲ್ಲು ಎಸೆದು ಪ್ರಚೋದನೆ ಮಾಡಿದ್ದಾರೆ. ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು. ಈಗಾಗಲೇ ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳಾಗಿದ್ದು ಜಿಲ್ಲೆಯಲ್ಲೂ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಲಿಂಗಾಯತರ ಹೋರಾಟಗಾರರ ಮೇಲೆ ಸಿದ್ದರಾಮಯ್ಯ ಸರ್ಕಾರ ಹಿಟ್ಲರ್ ರೀತಿ ವರ್ತಿಸಿದೆ, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಇಂದ್ರೇಶ್ ಮಾತನಾಡಿ, ಲಿಂಗಾಯತರ ಹೋರಾಟದ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯವಹಿಸುತ್ತಾ ಬಂದಿವೆ. ಲಿಂಗಾಯತರು ಅತ್ಯಂತ ಹಿಂದುಳಿದಿದ್ದಾರೆ, ಮೀಸಲಾತಿ ಕೇಳುವುದು ನಮ್ಮ ಹಕ್ಕು, ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ ೨ಎ ಮೀಸಲಾತಿ ನೀಡಲೇಬೇಕು, ಹಾಗೂ ಲಿಂಗಾಯತ ಉಪಸಮಾಜಗಳಿಗೆ ಮೀಸಲಾತಿಗಾಗಿ ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರವು ಕೂಡಲೇ ಶಿಪಾರಸ್ಸು ಮಾಡಲೇ ಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.

ಕೇಂದ್ರ ಸಮಿತಿ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ ಮಾತನಾಡಿ, ನಮ್ಮದು ಅನುಭವ ಮಂಟಪದ ಸಂಸ್ಕೃತಿ, ಕೊಂಡೇ ಮಂಚಣ್ಣನ ರೀತಿ ಈ ಸರ್ಕಾರ ನಮ್ಮವರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದರು. ಈ ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿ ಸರ್ಕಾರವಾಗಿದ್ದು, ೨ಎ ಮೀಸಲಾತಿ ನೀಡಿ ಕೇಂದ್ರಕ್ಕೆ ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು. ಮೀಸಲಾತಿಗಾಗಿ ಹೋರಾಡುತ್ತಿರುವ ಪಂಚಮಸಾಲಿ ಲಿಂಗಾಯತರಿಗೆ ಸರ್ಕಾರ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ ಎಂದರು. ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಂಜೇಶ್, ಖಜಾಂಚಿ ಗುರುಸ್ವಾಮಿ, ತಾಲೂಕು ಅಧ್ಯಕ್ಷ ಬಾಲಚಂದ್ರಮೂರ್ತಿ, ಜಿ.ಎಂ.ಮಹದೇವಸ್ವಾಮಿ ಇದ್ದರು.