ನಾವು ಮಾರ್ಗಸೂಚಿ ಅನುಸಾರ ಬರ ಪ್ರದೇಶ ಘೋಷಣೆ ಮಾಡಬೇಕು. ಅದರನ್ವಯ ಅಧ್ಯಯನ ಮಾಡಿ ಎರಡನೇ ಪಟ್ಟಿಯನ್ನು ಶೀಘ್ರವೇ ಘೋಷಣೆ ಮಾಡಲಾಗುವುದು.
ಮಾರ್ಗಸೂಚಿ ಅನುಸಾರವೇ ಘೋಷಣೆ, ರೈತರ ಪರಿಸ್ಥಿತಿ ಕಣ್ಣಾರೆ ಕಂಡಿರುವೆ. ನಮ್ಮ ವರದಿ ಹಾಗೂ ಕೇಂದ್ರದ ವರದಿ ಹೊಂದಾಣಿಕೆ ಆಗಬೇಕುಕನ್ನಡಪ್ರಭ ವಾರ್ತೆ ಗದಗ
ನಾವು ಮಾರ್ಗಸೂಚಿ ಅನುಸಾರ ಬರ ಪ್ರದೇಶ ಘೋಷಣೆ ಮಾಡಬೇಕು. ಅದರನ್ವಯ ಅಧ್ಯಯನ ಮಾಡಿ ಎರಡನೇ ಪಟ್ಟಿಯನ್ನು ಶೀಘ್ರವೇ ಘೋಷಣೆ ಮಾಡಲಾಗುವುದು. ಅದರಲ್ಲಿ ಗದಗ ಜಿಲ್ಲೆಯ ತಾಲೂಕುಗಳು ಇರಲಿವೆ ಎಂದು ಸಿಎಂ ಡಿ.ಕೆ.ಶಿವಕುಮಾರ ಹೇಳಿದರು.ಮಂಗಳವಾರ ಗದಗ, ಮುಂಡರಗಿ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಸಚಿವರು ಪ್ರತಿ ತಾಲೂಕಿಗೆ ಭೇಟಿ ನೀಡಿ, ವಾಸ್ತವಾಂಶದ ವರದಿ ನೀಡಿದ್ದಾರೆ. ಅದರ ಜತೆಗೆ ಅಧಿಕಾರಿಗಳು ಅಧ್ಯಯನ ಮಾಡಿ ಅವರು ವರದಿ ಸಲ್ಲಿಸಿದ್ದಾರೆ. ಎರಡೂ ವರದಿ ಪರಿಶೀಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಗದಗ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 50 ವರ್ಷಗಳಲ್ಲಿ ಭೀಕರ ಬರ ಪರಿಸ್ಥಿತಿಗೆ ಜಿಲ್ಲೆ ಒಳಗಾಗಿದೆ. ಈ ವರ್ಷ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ. ನಾನು ಹೆಲಿಕಾಪ್ಟರ್ ನಲ್ಲಿ ಬರುವಾಗ ನೋಡಿದೆ. ಹಲವು ಕಡೆ ಬಿತ್ತನೆಯೇ ಆಗಿಲ್ಲ. ಬಿತ್ತನೆ ಆಗಿರುವ ಕಡೆಗಳಲ್ಲಿ ಶೇ. 10ರಿಂದ 15 ಬೆಳೆ ಕೂಡ ರೈತರ ಕೈ ಸೇರುವುದಿಲ್ಲ, ರೈತರ ಜಮೀನಿಗೆ ಹೋಗಿ ಹತ್ತಿ, ಕಡಲೆಕಾಯಿ, ಜೋಳ, ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದ್ದೇನೆ. ರೈತರಿಗೆ ಯಾವ ಪ್ರಮಾಣದಲ್ಲಿ ತೊಂದರೆ ಆಗುತ್ತಿದೆ ಎಂದು ಮನವರಿಕೆ ಆಗಿದೆ. ರೈತರೊಂದಿಗೆ ಚರ್ಚೆ ಮಾಡಿದ್ದು, ಅವರ ನೋವು ತಿಳಿಸಿದ್ದಾರೆ. ಜನ ವಲಸೆ ಹೋಗುವುದನ್ನು ತಪ್ಪಿಸಲು ವಿಬಿಜಿ-ರಾಮ್ ಜಿ ಯೋಜನೆ ಹೇಗೆ ಸಹಾಯ ಆಗಬೇಕು ಎಂದು ತಿಳಿಸಿದ್ದಾರೆ. ಅದನ್ನು ಗಮನಿಸಲಾಗುವುದು ಎಂದರು.ಎಚ್.ಕೆ.ಪಾಟೀಲ ಮೋಡ ಬಿತ್ತನೆ ವಿಚಾರವಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದೇ ರೀತಿ ಬೇರೆ ಶಾಸಕರು ಬೇರೆ ಬೇರೆ ವಿಚಾರವಾಗಿ ಗಮನ ಸೆಳೆದಿದ್ದಾರೆ. ನೀರಾವರಿ, ಬೆಣ್ಣೆ ಹಳ್ಳ ಸೇರಿದಂತೆ ಬೇರೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ವರದಿ ಹೊಂದಾಣಿಕೆಯಾಗಬೇಕು:ಬರಗಾಲ ಕುರಿತು ನಮ್ಮ ವರದಿ ಕೇಂದ್ರದ ವರದಿ ಜತೆ ಹೊಂದಾಣಿಕೆ ಆಗಬೇಕು. ದೆಹಲಿಯಿಂದ ಬರುವ ಬರ ಅಧ್ಯಯನ ತಂಡಕ್ಕೆ ನಮ್ಮ ವರದಿ ಒಪ್ಪಿಗೆ ಆಗಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ನೆರವು ನೀಡಲಿದೆ. ನಾವು ನಮ್ಮ ಕೈಲಾದ ಕ್ರಮ ಕೈಗೊಂಡಿದ್ದೇವೆ. ಕುಡಿಯುವ ನೀರಿನ ಪೂರೈಕೆ ಬಗ್ಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗೆ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹೆಚ್ಚುವರಿ ಹಣ ಇಡಲಾಗಿದೆ. ಬರ ನಿರ್ವಹಣೆ ಕುರಿತು ಪ್ರತಿಯೊಬ್ಬ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಸಿಎಂ ಸೂಚಿಸಿದರು.
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ:ನಶಾಮುಕ್ತ ದೇಶ ನಿರ್ಮಾಣಕ್ಕೆ ಯುವಕರನ್ನು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಪಂ ₹10 ಲಕ್ಷ ಅನುದಾನ ನೀಡಲಾಗುವುದು. ಅನುದಾನವನ್ನು ಬಳಸಿಕೊಂಡು ಯುವಕರಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ನಾಯಕತ್ವ ಗುಣ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.
ತೇಗದ ಸಿರಿ ಯೋಜನೆ ಜಾರಿ:ರಾಜ್ಯ ಸರ್ಕಾರದಿಂದ ತೇಗದ ಸಿರಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ತೇಗದ ಮರಗಳನ್ನು ಬೆಳೆಸುವ ಮೂಲಕ ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚುವರಿ ಆದಾಯ ದೊರೆಯುವಂತೆ ಮಾಡುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.