ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ 2ನೇ ಮುಖಭಂಗ

| Published : Feb 28 2024, 02:36 AM IST / Updated: Feb 28 2024, 11:13 AM IST

BJP-JDS

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಚನೆಯಾದ ಬಳಿಕ ಎರಡನೇ ಬಾರಿಗೆ ಮುಖಭಂಗ ಉಂಟಾಗಿದೆ. ಇತ್ತೀಚೆಗಷ್ಟೇ ವಿಧಾನಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ಮುಖಂಡ ಎ.ಪಿ.ರಂಗನಾಥ್ ಅವರಿಗೆ ಸೋಲು ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಚನೆಯಾದ ಬಳಿಕ ಎರಡನೇ ಬಾರಿಗೆ ಮುಖಭಂಗ ಉಂಟಾಗಿದೆ. ಇತ್ತೀಚೆಗಷ್ಟೇ ವಿಧಾನಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ಮುಖಂಡ ಎ.ಪಿ.ರಂಗನಾಥ್ ಅವರಿಗೆ ಸೋಲು ಉಂಟಾಗಿತ್ತು. 

ಅದರ ಬೆನ್ನಲ್ಲೇ ಈಗ ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಹಿನ್ನೆಡೆಯಾಗಿದೆ.ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಲವೆಡೆ ಕಾಂಗ್ರೆಸ್ ಶಾಸಕರು ಬಿಜೆಪಿ ಪರ ಅಡ್ಡಮತದಾನ ಮಾಡಿದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಶಾಸಕರೇ ಕಾಂಗ್ರೆಸ್ ಪರ ಅಡ್ಡಮತದಾನ ಮಾಡಿದ್ದು ಪಕ್ಷದ ರಾಷ್ಟ್ರೀಯ ನಾಯಕರಿಗೆ ತೀವ್ರ ಮುಜುಗರ ಉಂಟು ಮಾಡಿದೆ ಎಂದು ಉನ್ನತ ಮೂಲಗ‍ಳು ತಿಳಿಸಿವೆ.

ಒಟ್ಟು ನಾಲ್ಕು ಸ್ಥಾನಗಳ ಪೈಕಿ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇರೆಗೆ ಆಡಳಿತಾರೂಢ ಕಾಂಗ್ರೆಸ್ಸಿಗೆ ಮೂರು ಮತ್ತು ಪ್ರತಿಪಕ್ಷ ಬಿಜೆಪಿಗೆ ಒಂದು ಸ್ಥಾನ ಸುಗಮವಾಗಿ ಲಭಿಸುತ್ತಿತ್ತು. 

ನಾಲ್ಕು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಇದ್ದಿದ್ದರೆ ಅವಿರೋಧವಾಗಿಯೇ ಆಯ್ಕೆಯಾಗುತ್ತಿತ್ತು. ಆದರೆ, ಬಿಜೆಪಿಯ ಹೆಚ್ಚುವರಿ ಮತಗಳು ಹಾಗೂ ಜೆಡಿಎಸ್‌ನ 19 ಮತಗಳನ್ನು ಇಟ್ಟುಕೊಂಡು ಐದನೇ ಅಭ್ಯರ್ಥಿಯನ್ನಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿ‍ಳಿಸಿದ್ದು ಹಿನ್ನೆಡೆಗೆ ಕಾರಣವಾಯಿತು.

ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಅಸಮಾಧಾನವಿದೆ ಎಂದು ಭಾವಿಸಿದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದರು. 

ಇದನ್ನು ಪಕ್ಷದ ವರಿಷ್ಠರಿಗೂ ಮನವರಿಕೆ ಮಾಡಿ ಒಪ್ಪಿಗೆ ಪಡೆದುಕೊಂಡರು. ಕೊರತೆಯಾಗುವ ಐದಾರು ಮತಗಳನ್ನು ಪಕ್ಷೇತರರು ಹಾಗೂ ಕಾಂಗ್ರೆಸ್ಸಿನ ಅಡ್ಡಮತದಾನದ ಮೂಲಕ ಪಡೆಯುವ ಲೆಕ್ಕಾಚಾರ ಹಾಕಿದರು. 

ಉಭಯ ಪಕ್ಷಗಳ ನಾಯಕರು ಈ ಸಂಬಂಧ ಕಾಂಗ್ರೆಸ್ಸಿನ ಶಾಸಕರನ್ನು ಸಂಪರ್ಕಿಸಿ ಮತಯಾಚಿಸಿದರು.ಇದಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ಶಾಸಕರಿಗೆ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ರವಿ ಗಾಣಿಗ ಅವರು ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು.

ಮಂಗಳವಾರ ಮತದಾನ ವೇಳೆ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಬೇಕು ಎಂಬ ತಂತ್ರ ರೂಪಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಮರ್ಮಾಘಾತ ಉಂಟಾಗಿದೆ. 

ಬಿಜೆಪಿಯ ಒಬ್ಬ ಶಾಸಕ ಎಸ್‌.ಟಿ.ಸೋಮಶೇಖರ್ ಅವರು ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರ ಅಡ್ಡಮತದಾನ ಮಾಡಿದರು. ಮತ್ತೊಬ್ಬ ಶಾಸಕ ಶಿವರಾಂ ಹೆಬ್ಬಾರ್ ಅವರು ಗೈರು ಹಾಜರಾಗುವ ಮೂಲಕ ಕಾಂಗ್ರೆಸ್ ಪರ ಒಲವು ತೋರಿದರು.

ಈ ನಡುವೆ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬೇಕಾಗಿರಲಿಲ್ಲ. ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ತಮ್ಮ ಶಾಸಕರಲ್ಲಿ ಒಗ್ಗಟ್ಟಿಗೆ ಎಂಬುದನ್ನು ಸಾಬೀತುಪಡಿಸಿದರು. 

ಆದರೆ, ಅವರಿಗೆ ಬೆಂಬಲಿಸಲು ಹೋಗಿ ನಮ್ಮ ಪಕ್ಷದ ಇಬ್ಬರು ಶಾಸಕರನ್ನು ಕಾಂಗ್ರೆಸ್ ಪರ ತೋರಿಸಿ ಮುಜುಗರ ಉಂಟಾಯಿತು ಎಂಬ ಚರ್ಚೆ ಬಿಜೆಪಿ ಪಾಳೆಯದಲ್ಲಿ ಆರಂಭವಾಗಿದೆ.