ಬೇಡಿಕೆ ಈಡೇರಿಕೆಗಾಗಿ ಗ್ರಾಮಾಡಳಿತಾಧಿಕಾರಿಗಳ 2ನೇ ಹಂತದ ಮುಷ್ಕರ

| Published : Feb 11 2025, 12:45 AM IST

ಸಾರಾಂಶ

ಕೇಂದ್ರ ಸ್ಥಾನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಟೇಬಲ್, ಕುರ್ಚಿ, ಅಲ್ಮೆರಾ, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಗೂಗಲ ಕ್ರೋಮ್ ಬುಕು ಅಥವಾ ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್‌ಗಳು ಸೇರಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗ್ರಾಮಾಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಕಪ್ಪು ಪಟ್ಟಿ ಧರಿಸಿ 2ನೇ ಹಂತದ ಅನಿರ್ದಿಷ್ಟಾವಧಿ ಮೌನಯುತ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ತಾಲೂಕು ಅಧ್ಯಕ್ಷ ರಮೇಶ್ ನೇತೃತ್ವದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಅನಿರ್ದಿಷ್ಟಾವದಿ ಮುಷ್ಕರ ನಡೆಸಿದರು.

ಕಂದಾಯ ಇಲಾಖೆಯಿಂದ ನಿರಂತರವಾಗಿ ಕೆಲಸಗಳ ಜವಾಬ್ದಾರಿ ವಹಿಸುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸ್ಥಾನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಟೇಬಲ್, ಕುರ್ಚಿ, ಅಲ್ಮೆರಾ, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಗೂಗಲ ಕ್ರೋಮ್ ಬುಕು ಅಥವಾ ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್‌ಗಳು ಸೇರಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.

ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಉಚ್ಛನ್ಯಾಯಾಲದನ್ವಯ ಸರ್ಕಾರವು ಮಾಡಿರುವ ವೃಂದ ಮತ್ತು ನೇಮಕಾತಿ ತಿದ್ದುಪಡಿಯನ್ನು ಯಥಾವತ್ತಾಗಿ ಸಮರ್ಥಿಸಿಕೊಳ್ಳುವುದು. ಕೆಲವು ವಿಶೇಷ ಚೇತನ, ತೀವ್ರ ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ಪ್ರಕರಣಗಳ ಹಾಗೂ ಮಾಜಿ ಸೈನಿಕರ ನಿಯೋಜನೆಗಳನ್ನು ಕೌನ್ಸಿಲಿಂಗ್ ಮೂಲಕ ನಿಯೋಜನೆ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.

ಮಾತೃ ಇಲಾಖೆ ಎಲ್ಲಾ ಕೆಲಸಗಳೊಂದಿಗೆ ಸರ್ಕಾರದ ಆದೇಶದಂತೆ ಚುನಾವಣೆ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಗುರುತರವಾದ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ದಿನನಿತ್ಯ ಸಾರ್ವಜನಿಕ ವಲಯದಲ್ಲಿ ನೂರಾರು ಸೇವೆಗಳನ್ನು ನೀಡುವಾಗ ನಮ್ಮಗಳ ಮೇಲೆ ದೈಹಿಕ ಹಲ್ಲೆ, ಕೊಲೆ ಪ್ರಕರಣಗಳು ಈಗಾಗಲೇ ನಿರಂತವಾಗಿ ನಡೆಯುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಆಪತ್ತಿನ ಭತ್ಯೆ 3 ಸಾವಿರ ರು. ನೀಡುವುದು. ಕಂದಾಯ ಇಲಾಖೆಯ 3 ವರ್ಷಗಳ ಸೇವೆ ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿ ರಚಿಸುವುದು. ಮುಖ್ಯವಾಗಿ ಪ್ರೋಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೈಬಿಡುವಂತೆ ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ, ಹಾಲಿ ಇರುವ ರ್‍ಯಾಂಕಿಂಗ್ ವ್ಯವಸ್ಥೆ ರದ್ದುಪಡಿಸುವುದು. ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಣೆ ಜೊತೆಗೆ ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಕಾರ್ಯದರ್ಶಿ ಮಹೇಂದ್ರ, ಜಿಲ್ಲಾ ಪ್ರತಿನಿಧಿ ರಘು ಎ ಗೌಡ, ನಿರ್ದೇಶಕರಾದ ಎಂ.ಎನ್ ಶ್ರೀಧರ್, ನಬೀಸಾಬ್ ಅತ್ತಾರ್, ಶಂಕರೇಗೌಡ, ದೇವರಾಜು, ಲಕ್ಕಪ್ಪ, ಸುಹಾಸ್, ದಿವ್ಯಶ್ರೀ, ಸೀಮಾ, ಜೀವನ್, ಸೌಮ್ಯ, ಉಮೇಶ್ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ಹಾಜರಿದ್ದರು.