ಸಾರಾಂಶ
ಜ.13ರಿಂದ 2ನೇ ಸ್ವಾಭಿಮಾನ ಶರಣ ಮೇಳ
ಕನ್ನಡಪ್ರಭ ವಾರ್ತೆ ಹುನಗುಂದ
ತಾಲೂಕಿನ ಹೂವನೂರು ಗ್ರಾಮದ ಹೊರ ವಲಯದಲ್ಲಿ ಜ.13 ರಿಂದ 15ರವರೆಗೆ ಮೂರು ದಿನಗಳ ಕಾಲ 2ನೇ ಸ್ವಾಭಿಮಾನ ಶರಣ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿ ನಡೆಸಿ ಸ್ವಾಭಿಮಾನಿ ಶರಣ ಮೇಳದ ಬಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಜನವರಿ 13 ರಂದು ಸ್ವಾಭಿಮಾನಿ ಶರಣ ಮೇಳ ಉದ್ಘಾಟನೆ ಧರ್ಮ, ಚಿಂತನೆಗೋಷ್ಠಿ, ಯುವ ಗೋಷ್ಠಿ 14 ರಂದು ಸಮುದಾಯ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ಕುಸರೆಳ್ಳು ವಿತರಣೆ ,ವಚನ ಪಾರಾಯಣ,ಮಹಿಳಾ ಗೋಷ್ಠಿ ಹಾಗೂ ಕೊನೆಯ ದಿನ 15 ರಂದು ಬಸವಯೋಗಿ ಸಿದ್ದರಾಮೇಶ್ವರರ ಜಯಂತಿ ಮತ್ತು ಪಥ ಸಂಚಲನ ಜರುಗಲಿದೆ ಎಂದು ತಿಳಿಸಿದರು.
ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿರುವ ಶರಣ ಮೇಳದ ಸಮ್ಮುಖವನ್ನು ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ ಹಾಗೂ ಬೆಳಗಾವಿ ಪ್ರಭುಲಿಂಗ ಸ್ವಾಮೀಜಿ ಅವರು ವಹಿಸಿಕೊಳ್ಳಲಿದ್ದು, ಅಕ್ಕನಾಗಲಾಂಬಿಕೆ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಜಯ ಬಸವಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಾಧೀಶರು ಪಾಲ್ಗೊಳ್ಳುವರ ಎಂದರು.ಮಾತಾಜಿ ಅವರ ಸಂಕಲ್ಪ ಸಾಕಾರಗೊಳಿಸಲು ಬಸವ ಧರ್ಮ ಸಂಸ್ಥಾಪನಾ ದಿನದಂದು ಸ್ವಾಭಿಮಾನ ಶರಣ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ರಾಷ್ಟ್ರೀಯ ಬಸವ ದಳದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೆಂಡಿಗೇರಿ ಇದ್ದರು.