ಮಲ್ಲಿಗೆ ನಾಡಿನ ಹೂ ನೆಲದಲ್ಲಿ 22 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ

ಹೂವಿನಹಡಗಲಿ:ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.22 ರಂದು ರಂಗಭಾರತಿ ಕಲಾ ಮಂದಿರದಲ್ಲಿ ಜರುಗಲಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಟಿ.ವೀರೇಂದ್ರ ಪಾಟೀಲ್‌ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಪಿ. ಪ್ರಕಾಶ ವೇದಿಕೆಯಲ್ಲಿ ಎಲ್ಲ ಕಾರ್ಯಕ್ರಮ ಆಯೋಜಿಸಿದ್ದು, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಮಹಾದ್ವಾರ, ಅಭಿನವ ಸರ್ವಜ್ಞ ರೆವರೆಂಡ್‌ ಚೆನ್ನಪ್ಪ ಉತ್ತಂಗಿ ಮಹಾದ್ವಾರಗಳಿಗೆ ಹೆಸರಿಡಲಾಗಿದೆ. ಕೆ.ವಿರೂಪಾಕ್ಷಗೌಡ ಪುಸ್ತಕ ಮಳಿಗೆ, ಎಂ.ಟಿ. ಪದ್ಮನಾಭ ಚಿತ್ರಕಲಾ ಮಳಿಗೆ ತೆರೆಯಲಾಗುತ್ತಿದೆ ಎಂದರು.

ನ.22 ರಂದು ಬೆಳಗ್ಗೆ 7.30ಕ್ಕೆ ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ ರಾಷ್ಟ್ರ ಧ್ವಜಾರೋಹಣ ನೆರವೇರಿಸುತ್ತಾರೆ, ಜಿಲ್ಲಾ ಪಂಚ ಗ್ಯಾರಂಟಿ ಉಪಾಧ್ಯಕ್ಷ ಕೆ.ಎಸ್‌. ಶಾಂತನಗೌಡ ನಾಡಧ್ವಜ, ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್‌ ಪರಿಷತ್‌ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕನ್ನಡ ಭುನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗವಿಮಠದಿಂದ ಸಕಲ ವಾದ್ಯ ವೈಭವ ಕುಂಭ, ಕಳಸ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಹೊರಡಲಿದ್ದು, ಮೆರವಣಿಗೆಗೆ ಸಿಪಿಐ ಮಲ್ಲಪ್ಪ ಹೂಗಾರ, ಪಂಚ ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಗುರುವಿನ ರವೀಂದ್ರ ಚಾಲನೆ ನೀಡುತ್ತಾರೆ ಎಂದರು.

ಬೆಳಗ್ಗೆ 10.30ಕ್ಕೆ ನಡೆಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಗವಿಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಬಸವಂತಪ್ಪ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಉಪಸ್ಥಿತಿಯಲ್ಲಿ ಶಾಸಕ ಕೃಷ್ಣನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ. ಕೆ.ರವೀಂದ್ರನಾಥ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ವಿದ್ವಾಂಸ ಡಾ. ಕೆ.ರುದ್ರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಟಿ.ವೀರೇಂದ್ರ ಪಾಟೀಲ್‌ ಭಾಗವಹಿಸಲಿದ್ದಾರೆ.

ಇದೇ ವೇಳೆ ಡಾ. ಕೆ.ರುದ್ರಪ್ಪ, ಡಾ. ಕೆ.ರವೀಂದ್ರನಾಥ, ಡಾ. ಮುದೇನೂರು ನಿಂಗಪ್ಪ ಸಂಪಾದಕತ್ವದ ಕನ್ನಡ ಬಯಲಾಟ ಚರಿತೆ ಸಂಪುಟ-1 ಪುಸ್ತಕವನ್ನು ಗೋಟಗೋಡಿಯ ಕರ್ನಾಟಕ ಜಾನಪದ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಲೋಕಾರ್ಪಣೆ ಮಾಡುತ್ತಾರೆ. ಪುಸ್ತಕ ಮಳಿಗೆಯನ್ನು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಚಿತ್ರಕಲಾ ಮಳಿಗೆಗೆ ಮಾಜಿ ಶಾಸಕ ಚಂದ್ರನಾಯ್ಕ ಚಾಲನೆ ನೀಡಲಿದ್ದಾರೆ ಎಂದರು.

ತಾಲೂಕು ದರ್ಶನ ಗೋಷ್ಠಿಯ ಅಧ್ಯಕ್ಷತೆ ನಿವೃತ್ತ ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ್‌ ವಹಿಸಲಿದ್ದು, ಕೃಷಿ, ಶಿಕ್ಷಣ, ಆರೋಗ್ಯ ಕುರಿತು ಡಾ. ಎಸ್‌.ಪಿ.ನಾಗನಗೌಡ ವಿಷಯ ಮಂಡಿಸುತ್ತಾರೆ, ಸಾಹಿತ್ಯ ಸಂಸ್ಕೃತಿಯಲ್ಲಿ ಸ್ತ್ರೀ ಧ್ವನಿ ಕುರಿತು ಸುಧಾ ಚಿದಾನಂದಗೌಡ ವಿಷಯ ಮಂಡಿಸುತ್ತಾರೆ, ಮರೆಯಲಾಗದ ಮಹಾನುಭಾವರು ವಿಷಯ ಕುರಿತು ಹಂಪಿ ವಿವಿಯ ಎಂ.ಎಂ. ಶಿವಪ್ರಕಾಶ ವಿಷಯ ಮಂಡಿಸುತ್ತಾರೆ ಎಂದು ಹೇಳಿದರು.

ಕವಿಗೋಷ್ಠಿ, ಸನ್ಮಾನ, ಮಹಿಳಾ ಕವಿಗೋಷ್ಠಿ, ಬಹಿರಂಗ ಅಧಿವೇಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮಾರೋಪ ಕಾರ್ಯಕ್ರಮ ಜರುಗುತ್ತವೆ ಎಂದರು.

ಸಮ್ಮೇಳನ ಸರ್ವಾಧ್ಯಕ್ಷ ಡಾ.ಕೆ. ರುದ್ರಪ್ಪ ಮಾತನಾಡಿ, ಈ ಮಲ್ಲಿಗೆ ನಾಡಿನ ಹೂ ನೆಲದಲ್ಲಿ 22 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯ ನೆಲೆಯಾದ ಈ ನೆಲದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯಿಕ ಚಟುವಟಿಕೆಗಳು ವಿರಳವಾಗಿದ್ದು, ಇಂತಹ ಸಂದರ್ಭದಲ್ಲಿ ಸಮ್ಮೇಳನ ಆಯೋಜನೆ ಉತ್ತಮ ಬೆಳವಣಿಗೆ. ಸಾಹಿತ್ಯ, ಕಲೆ ಬದುಕಿನ ಭಾಗವಾಗಬೇಕು, ಇಂದಿನ ಯುವ ಪೀಳಿಗೆಗೆ ಬದುಕನ್ನು ಕಟ್ಟಿ ಕೊಡುವ ಜತೆಗೆ ಅವರಿಗೆ ಸೂಕ್ತ ತರಬೇತಿ ಕೇಂದ್ರ ತೆರೆಯಬೇಕಿದೆ. ವೈಜ್ಞಾನಿಕ ರೀತಿಯಲ್ಲಿ ನೀರಾವರಿ ಯೋಜನೆ ವಿಸ್ತರಣೆ ಹೀಗೆ ನಾನಾ ರೀತಿಯ ಜನಪರ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ ಎಂದರು. ಈ ವೇಳೆ ತೋ.ಮ. ಶಂಕ್ರಯ್ಯ, ಎಚ್‌.ಜಿ.ಪಾಟೀಲ್‌, ಎಂ.ನಾಗರಾಜ, ಪದ್ಮರಾಜ ಜೈನ್‌, ಮುಂಡವಾಡ ಉಮೇಶ ಇದ್ದರು.