ವಿಶ್ವಪ್ರಸಿದ್ಧ ಏಕಶಿಲಾ ಗಿರಿ ಮಧುಗಿರಿ ಬೆಟ್ಟ ಏರಲು ರಾಜ್ಯದ ವಿವಿಧ ಭಾಗಗಳಿಂದ ಚಾರಣಕ್ಕೆ ಬಂದಿದ್ದ 3 ಸಾವಿರಕ್ಕೂ ಅಧಿಕ ಉತ್ಸಾಹಿಗಳು ಬೆಟ್ಟ ಹತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ವಿಶ್ವಪ್ರಸಿದ್ಧ ಏಕಶಿಲಾ ಗಿರಿ ಮಧುಗಿರಿ ಬೆಟ್ಟ ಏರಲು ರಾಜ್ಯದ ವಿವಿಧ ಭಾಗಗಳಿಂದ ಚಾರಣಕ್ಕೆ ಬಂದಿದ್ದ 3 ಸಾವಿರಕ್ಕೂ ಅಧಿಕ ಉತ್ಸಾಹಿಗಳು ಬೆಟ್ಟ ಹತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.ಬೆಂಗಳೂರು ರೋ-ಟ್ರ್ಯಾಕ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ ಸಂಸ್ಥೆ 3192 ಜಿಲ್ಲೆ ವತಿಯಿಂದ ರೋಟ್ರ್ಯಾಕ್ 2026 ಎಂಬ ಧ್ಯೇಯದೊಂದಿಗೆ ಏರ್ಪಡಿಸಿದ್ದ ಬೃಹತ್ ಚಾರಣದಲ್ಲಿ ಬೆಂಗಳೂರು, ಕೋಲಾರ, ಹಾಗೂ ಬೆಂಗಳೂರು ರೋಟರಿ ಸಂಸ್ಥೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಮೂರು ಸಾವಿರಕ್ಕೂ ಅಧಿಕ ಚಾರಣಿಗರು ಏಕಶಿಲಾ ಗಿರಿಯನ್ನು ಏಕ ಕಾಲಕ್ಕೆ ಹತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಮೂಲಕ ತೊಡಗಿ ಯಶಸ್ವಿಗೊಳಿಸಿದರು.
ಬೆಟ್ಟ ಹತ್ತುವ ಮೂಲಕ ಸ್ಥಳೀಯ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ, ಸ್ಥಳೀಯರು ಹಾಗೂ ಯುವಕ -ಯುವತಿಯರು ಸಹ ಪರಸ್ಪರರು ಸಹಕಾರ ನೀಡಿ ಚಾರಣಿಗರಿಗೆ ಜೊತೆಯಾಗಿ ನಿಂತು ಬೆಟ್ಟ ಏರುವ ನಿಟ್ಟಿನಲ್ಲಿ ಉತ್ಸಾಹ ಅಪರಿಮಿತ ಪರಿಶ್ರಮ ತೋರಿ ಚಾರಣಿಗರಿಗೆ ಸಾಥ್ ನೀಡಿದರು.ಚಾರಣಕ್ಕೆ ಆಗಮಿಸಿದ್ದವರಿಗೆ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಕುಡಿಯುವ ನೀರು ಹಾಗೂ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಬೆಟ್ಟ ಹತ್ತಿದ ನಂತರ ಬೆಟ್ಟದ ತುದಿಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ನಿಟ್ಟಿನಲ್ಲಿ ದೇಶಭಕ್ತಿ ತೋರಿದ ಚಾರಣಿಗರು ದೇಶ ಭಕ್ತಿಯ ಸಂದೇಶ ಸಾರಿದರು. ಇದರಿಂದ ಮಧುಗಿರಿಯ ಬೆಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೂಯಿದಿದ್ದು ಕಂಡು ಬಂದಿತು. ಇದಕ್ಕೆ ಸಾವಿರಾರು ಹೆಜ್ಜೆ ಗುರುತುಗಳು ಕೂಡ ಸಾಕ್ಷಿಯಾದವು.
ಬೆಟ್ಟ ಹತ್ತುವ ಈ ಸಂತಸದ ಸಂಭ್ರಮದಲ್ಲಿ ಭಾಗವಹಿಸಿದ್ದ ಎಂಎಲ್ಸಿ ಆರ್. ರಾಜೇಂದ್ರ ಮಾತನಾಡಿ, ಇದೊಂದು ಐತಿಹಾಸಿಕ ಹೆಜ್ಜೆ ಗುರುತುಗಳ ಕ್ಷಣ, ವಿಶ್ವಪ್ರಸಿದ್ಧ ಏಕಶಿಲಾ ಬೆಟ್ಟವನ್ನು ಇದೇ ಪ್ರಥಮ ಬಾರಿಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಚಾರಣ ಕೈಗೊಂಡಿರುವುದು ಸಂತಸ ತಂದಿದೆ. ಬುಡಕಟ್ಟು ಜನಾಂಗದ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ನಿಟ್ಟಿನಲ್ಲಿ ಶಿಕ್ಷಣದಿಂದ ಯಾವೊಬ್ಬ ಮಗು ವಂಚಿತರಾಗಬಾರದು ಎಂಬುದಾಗಿ ತಿಳಿಸಿ, ಮಧುಗಿರಿಯ ಅಸ್ಮಿತೆಯಾಗಿರುವ ಏಕಶಿಲಾ ಬೆಟ್ಟಕ್ಕೆ ಒಂದೇ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಚಾರಣ ಕೈಗೊಂಡಿರುವುದು ವಿಶೇಷವಾಗಿದೆ. ಮಧುಗಿರಿಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಹೆಜ್ಜೆಯಾಗಿವೆ ಎಂದರು. ರೋಟರಿ ಇಂಟರ್ ನ್ಯಾಷನಲ್ ನಿರ್ದೇಶಕ ಕೆ.ಪಿ.ನಾಗೇಶ್ ಮಾತನಾಡಿ, ಬೆಟ್ಟ ಹತ್ತುವ ಕಾರ್ಯಕ್ಕೆ ಬಹುತೇಕ ಯುವ ಜನರು ಬಂದಿದ್ದು, ಏಕಶಿಲಾ ಬೆಟ್ಟ ಐತಿಹಾಸಿಕ ಕುರುವನ್ನು ಮುಂದಿನ ಪೀಳಿಗೆಗ ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದರು.ರೋಟರಿ ಸಂಸ್ಥೆ ಪ್ರತಿನಿಧಿಗಳಾದ ಆರ್.ಸಂಜಯ್,ರೇಣುಕಾ ಪ್ರಸಾದ್, ನವೀನ್ ಸೆನ್ನಾ,ದಿಶಾ ಹಾಗೂ ಮಧುಗಿರಿ ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್,ಡಿ.ಎಸ್.ಮುನೀಂದ್ರ ಕುಮಾರ್,ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್,ಕೆ.ನಾರಾಯಣ್,ರೋಟರಿ ಮಾಜಿ ಅಧ್ಯಕ್ಷರಾದ ಎಂ.ವೆಂಕಟರಾಮು,ಎಂ.ಶಿವಲಿಂಗಪ್ಪ,ಪಿ.ಕೆ.ರಂಗಸ್ವಾಮಿ,ನಟರಾಜ್ ಹಾಗೂ ಮಧುಗಿರಿಯ ವಿವಿಧ ಹಂತದ ಜನಪ್ರತಿನಿಧಿಗಳು ಸಾರ್ವಜನಿಕರು ಭಾಗವಹಿಸಿದ್ದರು.