ಸಾರಾಂಶ
- ಕತ್ತಲಗೆರೆಯಲ್ಲಿ ಸಂಸದೆ ಡಾ.ಪ್ರಭಾ ಹೇಳಿಕೆ । ಜೆಜೆಎಂ ಯೋಜನೆ ಕಾರ್ಯಕ್ರಮ - - -
ಕನ್ನಡಪ್ರಭ ವಾರ್ತೆ ದಾವಣಗೆರೆನೀರಿನಿಂದ ಬರುವ ಕಾಯಿಲೆಗಳಿಗೆ ಪ್ರತಿ ವರ್ಷ ದೇಶದಲ್ಲಿ 37 ಲಕ್ಷ ಜನರು ತುತ್ತಾದರೆ, 3.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ಜನರಿಗೆ ಉತ್ತಮ ನೀರು, ಆರೋಗ್ಯ ಕಲ್ಪಿಸಲು ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಮಾಯಕೊಂಡ ಕ್ಷೇತ್ರಕ್ಕೆ ಒಳಪಡುವ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಸೋಮವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕತ್ತಲಗೆರೆ ಗ್ರಾ.ಪಂ.ನಿಂದ ಜಲಜೀವನ್ ಮಿಷನ್ ಯೋಜನೆಯಡಿ 24*7 ನೀರು ಪೂರೈಸುವ ಗ್ರಾಮ ಘೋಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆ ಸದ್ಬಳಕೆಗೆ ಜನರು ಮುಂದಾಗಬೇಕು ಎಂದರು.ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಶೇ.50ರಷ್ಟು ಪೂರ್ಣವಾಗಿದೆ. 38 ಗ್ರಾಮಗಳಲ್ಲಿ ಪೂರ್ಣಗೊಳಿಸಿ, ನೀರು ಒದಗಿಸಲಾಗುತ್ತಿದೆ. ಆ.15ರೊಳಗೆ ಇನ್ನೂ 50 ಗ್ರಾಮಗಳಿಗೆ ಯೋಜನೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಕಳೆದೊಂದು ತಿಂಗಳಿನಿಂದ ನೀರು ಪೂರೈಕೆಯಾಗಿದ್ದು, ಇದರಿಂದ 55 ಲಕ್ಷ ಲೀಟರ್ ನೀರು ಉಳಿತಾಯ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಜಿಲ್ಲೆಯ ಅನೇಕ ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿ ಆಗುತ್ತಿದ್ದರೆ ಅದು ಜಲಜೀವನ್ ಮಿಷನ್ ಯೋಜನೆಯಲ್ಲಿ ಮಾತ್ರ. ಯಾವುದೇ ಹಳ್ಳಿಗೆ ಹೋದರೂ ಕಳಪೆ ಕಾಮಗಾರಿ ಬಗ್ಗೆ ಜನರಿಂದ ದೂರು ಕೇಳಿಬರುತ್ತಿದೆ. ಈವರೆಗೆ ಯೋಜನೆ ಯಶಸ್ವಿಯಾದ ಬಗ್ಗೆ ಜನರಿಂದ ಒಂದೂ ಮಾತು ಕೇಳಿಲ್ಲ. ಇಂತಹ ಗಂಭೀರ ವಿಚಾರದ ಬಗ್ಗೆ ಜೆಜೆಎಂ ಯೋಜನೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ. ವಾರದಲ್ಲಿ ನಾಲ್ಕೈದು ದಿನ ಇಡೀ ಕ್ಷೇತ್ರಾದ್ಯಂತ ಸುತ್ತುವವನು ನಾನು. ಜೆಜೆಎಂ ಯೋಜನೆ ಕೆಲಸ ಆಗದಿದ್ದರೂ ಶೇ.100 ಕೆಲಸವಾಗಿದೆಯೆಂದು ಎನ್‌ಒಸಿ ಕೊಡುತ್ತಿದ್ದಾರೆ. ಪ್ರತಿನಿತ್ಯ ಕ್ಷೇತ್ರದಲ್ಲೇ ಇರುವ ನನಗೆ ಜನರು ಅನುಭವಿಸುವ ನೋವುಗಳ ಬಗ್ಗೆಯೂ ಅರಿವಿದೆ. ಜನಜೀವನ, ಕಷ್ಟ, ನಷ್ಟಗಳನ್ನು ತೀರಾ ಹತ್ತಿರದಿಂದ ನೋಡುತ್ತಿದ್ದೇನೆ. ಈ ಬಗ್ಗೆ ಜಿಪಂ ಸಿಇಒ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸೂಚಿಸಿದರು.ಜಿಪಂ ಸಿಇಒ ಗಿಟ್ಟೆ ಮಾಧವ್ ವಿಠಲರಾವ್, ಚನ್ನಗಿರಿ ತಾಪಂ ಇಒ ಉತ್ತಮ್, ಕತ್ತಲಗೆರೆ ಗ್ರಾಪಂ ಅಧ್ಯಕ್ಷ ಮಂಜಪ್ಪ, ರೈತ ಮುಖಂಡರಾದ ತೇಜಸ್ವಿ ವಿ.ಪಟೇಲ್, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ, ಕತ್ತಲಗೆರೆ ಡಿ.ತಿಪ್ಪಣ್ಣ, ಗ್ರಾಮದ ಮುಖಂಡರು, ಗ್ರಾಮಸ್ಥರು ಇದ್ದರು.
- - -(ಕೋಟ್) ಕತ್ತಲಗೆರೆಗೆ ಬರುವ ಪೂರ್ವದಲ್ಲಿ ಕಾರಿಗನೂರಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ಸಮಾಧಿ ಬಳಿ ಹೋಗಿದ್ದೆ. ಅಲ್ಲಿ ಸಮಾಧಿ ಕೆಲಸ ಅಪೂರ್ಣವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಜೊತೆಗೆ ಚರ್ಚಿಸಿ, ಅದನ್ನು ಪೂರ್ಣಗೊಳಿಸಲಾಗುವುದು.
- ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ.- - -
(ಟಾಪ್ ಕೋಟ್) ಮಾಯಕೊಂಡ ಕ್ಷೇತ್ರದ ಶಾಲೆ, ರಸ್ತೆ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಮಸ್ಯೆ ಬಗ್ಗೆ ಶಾಸಕ ಕೆ.ಎಸ್.ಬಸವಂತಪ್ಪ ಹೇಳುತ್ತಿರುತ್ತಾರೆ. ಸಂಸದರ ಅನುದಾನ ದಡಿ ₹85 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೇನೆ. ವಸತಿ, ಶಾಲೆ, ರಸ್ತೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಬೇರೆ ಬೇರೆ ಯೋಜನೆಗಳ ಮೂಲಕ ನಾನು, ಸಚಿವರು, ಶಾಸಕರ ಅನುದಾನ ಬಿಡುಗಡೆ ಮಾಡಿಸಿ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು.- ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ.
- - --14ಕೆಡಿವಿಜಿ9.ಜೆಪಿಜಿ:
24*7 ನೀರು ಪೂರೈಸುವ ಗ್ರಾಮ ಘೋಷಣೆ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.