ಸಾರಾಂಶ
ಶಿವಮೊಗ್ಗ : ಕ್ರಿಸ್ತ ಪೂರ್ವ 1500ರಿಂದ ಕ್ರಿ.ಪೂ. 800 ಅಂದರೆ ಸುಮಾರು 3500 ವರ್ಷ ಹಳೆಯದಾದ ನವ ಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರವೊಂದು ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಗುರುವಾರ ಪತ್ತೆಯಾಗಿದೆ.
ಹಿಂಡ್ಲೆಮನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕ ಹನುಮಂತಪ್ಪ ಎಂಬುವರಿಗೆ ಈ ಉಂಗುರ ಸಿಕ್ಕಿದೆ. ಈ ಪ್ರದೇಶದಿಂದ ಸುಮಾರು 1 ಕಿ.ಮೀ. ದೂರದಲ್ಲಿ ಉಂಗುರ ಸಿಕ್ಕಿರುವ ಸಮೀಪವೇ ಶರ್ಮಿಣ್ಯಾವತಿ ಎಂಬ ನದಿಯು ಹರಿಯುತ್ತಿದ್ದು, ಇದು ಬಳಿಕ ಶರಾವತಿ ನದಿಯಲ್ಲಿ ಲೀನವಾಗುತ್ತದೆ. ಇದು ಶರಾವತಿ ನದಿ ದಡದಲ್ಲಿ ಆಗಿನ ಕಾಲದಲ್ಲಿ ಜನವಸತಿ ಇತ್ತು ಎಂಬುದನ್ನು ಸೂಚಿಸುತ್ತದೆ.
ಈ ಪ್ರದೇಶದಲ್ಲಿ ನವ ಶಿಲಾಯುಗ ಕಾಲದ ಅತ್ಯಂತ ಅಮೂಲ್ಯವಾದ ವಸ್ತುವೊಂದು ಇದೇ ಮೊದಲ ಬಾರಿಗೆ ದೊರಕಿದೆ. ಈ ಡೋಲೆರೈಟ್ ಕಲ್ಲಿನ ಉಂಗುರವು ಈ ಪ್ರದೇಶದಲ್ಲಿ ಮೊದಲು ಜನವಸತಿ ಆರಂಭವಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನೆಲೆಗೊಂಡ ಮಾನವನ ಜೀವನಶೈಲಿಯ ಆರಂಭದ ದಿನಗಳನ್ನು ಇದರಿಂದ ತಿಳಿಯಬಹುದಾಗಿದೆ. ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಮಣಿಗಳಿಗೆ ಹೊಳಪು ಕೊಡುವುದು ಸೇರಿದಂತೆ ನಿತ್ಯ ಜೀವನದ ಅನೇಕ ಕೆಲಸಗಳಿಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ.