ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯಾದ್ಯಂತ ತೀವ್ರ ತೆರನಾದ ಬರಗಾಲವಿದೆ. ರೈತ ಸಮುದಾಯ ಬಿತ್ತನೆ ಮಾಡಿದ ಬೀಜಗಳೇ ಮರಳಿ ಕೈಗೆ ಬರದಂತಾಗಿದೆ. ಆದರೆ ಜಿಲ್ಲೆಯ ಸಾಮಾಜಿಕ ಅರಣ್ಯ ಇಲಾಖೆ ಮಾತ್ರ ಪ್ರಸಕ್ತ ಸಾಲಿನಲ್ಲಿ 7 ತಾಲೂಕುಗಳ ವ್ಯಾಪ್ತಿಯಲ್ಲಿ 3,82,850 ಸಸಿಗಳನ್ನು ನೆಟ್ಟಿದ್ದು, ಅವುಗಳ ನಿರ್ವಹಣೆಯಾಗುತ್ತಿದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಿದೆ. ಇದು ಖುದ್ದು ರೈತರ ಆಶ್ಚರ್ಯಕ್ಕೆ ಕಾರಣವಾಗಿದೆ.ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯವೇ ಅರಣ್ಯ ಬೆಳವಣಿಗೆ ಉತ್ತೇಜಿಸುವುದು, ರೈತರಿಗೆ ಸಸಿಗಳನ್ನು ವಿತರಣೆ ಮಾಡುವುದು, ರಸ್ತೆಗಳ ಪಕ್ಕದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ನಿರ್ವಹಣೆ ಮಾಡುವುದಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿನ ತೀವ್ರ ಮಳೆ ಕೊರತೆ ಮಧ್ಯೆ ಅದು ಹೇಗೆ ಸಾಧ್ಯವಾಗಲಿದೆ ಎನ್ನುವ ಪ್ರಶ್ನೆ ಮೂಡಿದೆ.
37 ಹೆಕ್ಟೇರ್‌ನಲ್ಲಿ ನೆಡುತೋಪು: ಜಿಲ್ಲೆಯ ರೋಣ, ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ನರಗುಂದ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 154 ಕಿಮೀ ಉದ್ದ ಹಾಗೂ 37 ಹೆಕ್ಟೇರ್ ಪ್ರದೇಶಗಳಲ್ಲಿ ನೆಡುತೋಪು ನಿರ್ಮಾಣ ಸೇರಿದಂತೆ ಒಟ್ಟು 3,82,850 ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಬೇವು, ಹೊಂಗೆ, ಅರಳೆ, ಆಲ, ಬಾಗೆ, ಹುಣಸೆ, ಸಾಗವಾನಿ ಪ್ರಮುಖವಾಗಿವೆಯಂತೆ.ನರೇಗಾ ಕೂಡಾ ಬಳಕೆ: ಪ್ರಸಕ್ತ ಸಾಲಿನ ನರೇಗಾ ಯೋಜನೆಯನ್ನು ಸಾಮಾಜಿಕ ಅರಣ್ಯ ಇಲಾಖೆ ಬಳಕೆ ಮಾಡಿಕೊಂಡು ವಿವಿಧ ಅಳತೆ (ಎತ್ತರದ ಮೇಲೆ ನಿರ್ಧಾರವಾಗುತ್ತದೆ) ಒಟ್ಟು1,58,000 ಸಸಿಗಳನ್ನು ಬೆಳೆಸಲಾಗಿದೆ. ಇವುಗಳನ್ನು ಕೂಡಾ ಹಂತ ಹಂತವಾಗಿ ಎನ್.ಎಂ.ಆರ್. ಸೃಜಿಸಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ದಾಖಲೀಕರಿಸಲಾಗಿದೆ.ಬರಗಾಲದಲ್ಲಿ ಸಾಧ್ಯವೇ?: ಕಳೆದ 10 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಮಳೆ ಕೊರತೆಯನ್ನು ಈ ಬಾರಿ ಗದಗ ಜಿಲ್ಲೆ ಎದುರಿಸುತ್ತಿದೆ. ಅತ್ಯಂಕ ಕನಿಷ್ಠ ಮಳೆ ಬಂದ ಹಿನ್ನೆಲೆಯಲ್ಲಿ ಎಲ್ಲ 7 ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿದೆ. ಆದರೆ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ 2023-24ನೇ ಸಾಲಿನಲ್ಲಿ 3 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು ಅವುಗಳ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಬರಗಾಲದಲ್ಲಿ ಇದು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಯಾವ ಯಾವ ರಸ್ತೆಗಳಲ್ಲಿ ಈ ಗಿಡಗಳು ಬೆಳೆದಿವೆ? ಅವುಗಳ ನಿರ್ವಹಣೆ ಎಂದರೆ ಅದನ್ನು ಇಲಾಖೆ ಹೇಗೆ ನಿಭಾಯಿಸಿದೆ ಎನ್ನುವ ಬಗ್ಗೆ ತನಿಖೆಯಾಗಬೇಕಿದೆ.ಸಾಮಾಜಿಕ ಅರಣ್ಯ ಇಲಾಖೆಯಿಂದ ರೈತರಿಗೆ ಸಸಿಗಳನ್ನು ವಿತರಣೆ ಮಾಡಿರುವುದಾಗಿ ಹಾಗೂ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟಿರುವುದಾಗಿ ಇಲಾಖೆ ತಿಳಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಸಮಿತಿ ರಚಿಸಿ ತನಿಖೆ ನಡೆಸಬೇಕು. ಪ್ರಸಕ್ತ ಸಾಲಿನಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ಸಸಿಗಳು ಬೆಳೆಯಲು ಸಾಧ್ಯವಿಲ್ಲ. ಇನ್ನು ಅವುಗಳ ನಿರ್ವಹಣೆ ಹೇಗೆ? ಇದನ್ನು ಪರಿಶೀಲನೆ ನಡೆಸಬೇಕು ಎಂದು ಹೋರಾಟಗಾರ ಚಂದ್ರಕಾಂತ ಚವ್ಹಾಣ, ರೈತ ಮುಖಂಡ ಮೇಘರಾಜ ಭಾವಿ, ರೈತ ಸಂಘದ ಪದಾಧಿಕಾರಿ ಬಸವರಾಜ ಸಜ್ಜನರ ಇತರರು ಆಗ್ರಹಿಸಿದ್ದಾರೆ.