ಸಾರಾಂಶ
ರಾಮನಗರ: ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲಾಗಿರುವ ಮೂರು ಬಡಾವಣೆಗಳ ಅಭಿವೃದ್ಧಿಗೆ ನಿಗದಿ ಪಡಿಸಿರುವ ಶುಲ್ಕ ಪಾವತಿಸಲು ನೀಡಿರುವ ಗಡುವು ಸೆ.15ರಂದು ಮುಗಿಯಲಿದ್ದು, ಆನಂತರ ಪಾವತಿಸುವವರಿಗೆ ಶೇ. 3ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ಕಣ್ವ, ಅರ್ಕಾವತಿ, ಹೆಲ್ತ್ ಸಿಟಿ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಿವೇಶನ ಮಾಲೀಕರಿಂದ ಅಭಿವೃದ್ದಿ ಶುಲ್ಕ ಪಡೆಯಲು ಸರ್ಕಾರದ ಆದೇಶದಂತೆ ಕ್ರಮ ವಹಿಸಲಾಗಿದೆ. ನಿವೇಶನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಭಿವೃದ್ಧಿ ಶುಲ್ಕ ಪಾವತಿಸಲು ಇದುವರೆಗೆ 5 ಬಾರಿ ಗಡುವು ನೀಡಿದ್ದರು ಸಹ ಇನ್ನೂ 591 ನಿವೇಶನ ಮಾಲೀಕರುಗಳು ಅಭಿವೃದ್ಧಿ ಶುಲ್ಕ ಪಾವತಿಸಿಲ್ಲ ಎಂದರು.ಈ ವಿಷಯವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅ.30 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಹಿಂದೆ ನೀಡಿದ್ದ ಕಡೆ ಗಡುವು ದಿನಾಂಕ ಮತ್ತು ಮಾರ್ಚ್ ನಿಂದ ಆಗಸ್ಟ್ ವರೆಗೆ ಅಭಿವೃದ್ಧಿ ಶುಲ್ಕ ಪಾವತಿ ಮಾಡಿರುವ ನಿವೇಶನದಾರರಿಗೆ ನ್ಯಾಯ ಒದಗಿಸಲು ಹಾಗೂ ಹಣ ಪಾವತಿ ಮಾಡದವರ ಮನವಿಯನ್ನು ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಿ ಸೆ.15 ರವರೆಗೆ ಗಡುವು ನೀಡಲಾಯಿತು. ನಂತರ ಸೆ.15 ರಿಂದ ಅ.15ರವರೆಗೆ ಅಭಿವೃದ್ಧಿ ಶುಲ್ಕ ಪಾವತಿಸುವವರಿಗೆ ಶೇ.3ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಿ ಹಣ ಪಾವತಿ ಮಾಡಿಕೊಳ್ಳುವಂತೆ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಕಣ್ವ, ಅರ್ಕಾವತಿ, ಹೆಲ್ತ್ ಸಿಟಿ ಬಡಾವಣೆಗಳ ನಿವೇಶನ ದಾರರಿಂದ ಇದುವರೆಗೆ 25 ಕೋಟಿ ರು. ಅಭಿವೃದ್ದಿ ಶುಲ್ಕ ಪ್ರಾಧಿಕಾರಕ್ಕೆ ಪಾವತಿಯಾಗಿದೆ. ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ ಡಿಪಿಆರ್ ಸಿದ್ದಪಡಿಸಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಅಕ್ಟೋಬರ್‌ನಲ್ಲಿ ಬಡಾವಣೆಗಳ ಅಭಿವೃದ್ಧಿಗೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.ಮೂರು ಬಡಾವಣೆಗಳಲ್ಲಿ 1661 ನಿವೇಶನದಾರರಿದ್ದು, ಇದುವರೆಗೆ 1070 ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿಸಿದ್ದು, 591 ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿಸಬೇಕಿದೆ. ಹಾಗಾಗಿ ಶುಲ್ಕ ಪಾವತಿಸದ ನಿವೇಶನ ದಾರರು ಆದಷ್ಟು ಬೇಗ ಆಯುಕ್ತರು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ ಹೆಸರಿಗೆ ಡಿ.ಡಿ ಮುಖಾಂತರ ಹಣ ಪಾವತಿಸಿ, ಹಂಚಿಕೆ ಮೂಲಕ ನಿವೇಶನ ಪಡೆದವರು ಶುದ್ಧ ಕ್ರಯಪತ್ರ ಹಾಗೂ ಹರಾಜು ಮುಖಾಂತರ ನಿವೇಶನ ಪಡೆದವರು ನಿರಪೇಕ್ಷಣಾ ಪತ್ರ ಪಡೆದುಕೊಳ್ಳುವಂತೆ ಚೇತನ್‌ಕುಮಾರ್ ಮನವಿ ಮಾಡಿದರು.
11ಕೆಆರ್ ಎಂಎನ್ 2.ಜೆಪಿಜಿರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್.