ಕೂಡ್ಲಿಗಿಯ ಚಿನ್ನಹಗರಿ ಹಳ್ಳದಲ್ಲಿ ಮುಳುಗಿ 3 ಬಾಲಕರು ಸಾವು

| Published : Oct 09 2024, 01:30 AM IST

ಸಾರಾಂಶ

ನೀರಿಗಿಳಿದು ಈಜುತ್ತಿರುವಾಗ ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಕೂಡ್ಲಿಗಿ: ತಾಲೂಕಿನಲ್ಲಿನ ಚಿನ್ನಹಗರಿ ಹಳ್ಳದಲ್ಲಿ ನೀರಿಗಿಳಿದು ಈಜಾಡುವಾಗ ಕೆಸರಲ್ಲಿ ಸಿಲುಕಿ ಮೂವರು ಶಾಲಾ ಬಾಲಕರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ತಾಲೂಕಿನ ಕುಮತಿ ಗ್ರಾಮದಲ್ಲಿ ನಡೆದಿದೆ. ಕುಮತಿ ಗ್ರಾಮದ ಸಾಗರ (14), ಗುರು (14), ವಿನಯ (11) ಮೃತ ದುರ್ದೈವಿಗಳು.

ದಸರಾ ರಜೆ ಇರುವುದರಿಂದ ಬಾಲಕರು ಈಜಲು ತೆರಳಿದ್ದರು. ನೀರಿಗಿಳಿದು ಈಜುತ್ತಿರುವಾಗ ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಬಹಳ ಸಮಯವಾದರೂ ಬಾಲಕರು ಮನೆಗೆ ಬಾರದೇ ಇರುವಾಗ ಪಾಲಕರು ಹಳ್ಳದ ಕಡೆ ಹೋಗಿರಬಹುದೆಂದು ತಿಳಿದು ಇತ್ತ ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಹಳ್ಳದ ದಂಡೆಯಲ್ಲಿ ಮಕ್ಕಳು ಬಟ್ಟೆ, ಚಪ್ಪಲಿ ಬಿಟ್ಟಿದ್ದರು. ಹುಡುಕಾಟ ನಡೆಸಿದಾಗ ಸ್ವಲ್ಪ ದೂರದಲ್ಲಿ ಕೆಸರಿನಲ್ಲಿ ಸಿಲುಕಿದ ಸ್ಥಿತಿಯಲ್ಲಿ ಮಕ್ಕಳ ಮೃತದೇಹ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಶಾಸಕ, ಎಸ್ಪಿ ಭೇಟಿ:

ಬಾಲಕರು ಮೃತಪಟ್ಟ ಘಟನೆಯ ಮಾಹಿತಿ ತಿಳಿದ ಕೂಡಲೇ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ವಿಜಯನಗರ ಎಸ್ಪಿ ಶ್ರೀಹರಿಬಾಬು ಸಂಜೆ 7 ಗಂಟೆ ಸುಮಾರಿಗೆ ಕುಮತಿ ಗ್ರಾಮಕ್ಕೆ ಭೇಟಿ ಹೆತ್ತವರಿಗೆ ಸಂತೈಸುವ ಕೆಲಸ ಮಾಡಿದರು.

ಈ ಬಗ್ಗೆ ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳನ್ನು ಕಳೆದುಕೊಂಡ ಕುಮತಿ ಗ್ರಾಮದ ಪೋಷಕರನ್ನು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಸಂತೈಸಿದರು.