ಗುಡೇಕೋಟೆಯ ಕೋಟೆ ಅಭಿವೃದ್ಧಿಗೆ ₹೩ ಕೋಟಿ ಅನುದಾನ: ಡಾ. ಎನ್.ಟಿ. ಶ್ರೀನಿವಾಸ್

| Published : Feb 25 2024, 01:54 AM IST

ಗುಡೇಕೋಟೆಯ ಕೋಟೆ ಅಭಿವೃದ್ಧಿಗೆ ₹೩ ಕೋಟಿ ಅನುದಾನ: ಡಾ. ಎನ್.ಟಿ. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ನಡೆಯುವ ಎರಡು ದಿನಗಳ ಗುಡೇಕೋಟೆ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ನೀಡಲಾಯಿತು. ಇದೇ ಮೊದಲ ಬಾರಿಗೆ ಗುಡೇಕೋಟೆಯಲ್ಲಿ ಎರಡು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೂಡ್ಲಿಗಿ: ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರದಿಂದ ಗುಡೇಕೋಟೆ ಉತ್ಸವ ಆಚರಿಸುವ ಮೂಲಕ ನಾನು ನುಡಿದಂತೆ ನಡೆದಿದ್ದೇನೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.

ತಾಲೂಕಿನ ಗುಡೇಕೋಟೆಯಲ್ಲಿ ನಡೆಯುವ ಎರಡು ದಿನಗಳ ಗುಡೇಕೋಟೆ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಉತ್ಸವಕ್ಕೆ ಸೇರಿದ ಜನಸಾಗರವನ್ನು ನೋಡಿ ಮಾತು ಹೊರಡದಂತಾಗಿದೆ. ಒನಕೆ ಓಬವ್ವನ ತವರೂರು, ಪಾಳೇಗಾರರು ಆಳಿದ ನಾಡಿನಲ್ಲಿ ಜನರ ಸಂಭ್ರಮ ನೋಡಿ ಹೃದಯ ತುಂಬಿ ಬಂದಿದೆ. ಮುಂದಿನ ವರ್ಷಗಳಲ್ಲಿ ಉತ್ಸವವನ್ನು ಮತ್ತಷ್ಟು ವಿಜೃಂಭಣೆಯಿಂದ ಮಾಡೋಣ ಎಂದು ತಿಳಿಸಿದರಲ್ಲದೆ, ಗುಡೇಕೋಟೆಯ ಐತಿಹಾಸಿಕ ಕೋಟೆ ಅಭಿವೃದ್ಧಿಗೆ ₹೩ ಕೋಟಿಯನ್ನು ಸರ್ಕಾರ ನೀಡಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಗುಡೇಕೋಟೆ ಉತ್ಸವದ ರೂವಾರಿ ಈ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರೇ ಆಗಿದ್ದಾರೆ. ಜನರ ಆಶಾಭಾವನೆಗೆ ಸ್ಪಂದಿಸಿದ್ದು, ಗುಡೇಕೋಟೆ ಉತ್ಸವ ಒನಕೆ ಓಬವ್ವನ ಉತ್ಸವವೇ ಆಗಿದೆ. ಇಂಥ ಉತ್ಸವವು ಭ್ರಾತೃತ್ವ, ಸೌಹಾರ್ದತೆಗೆ ಸಾಕ್ಷಿಯಾಗಲಿದ್ದು, ಕಲಾವಿದರ ಕಲಾ ಸಿರಿವಂತಿಕೆ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದು ಹೇಳಿದರು.

ಪದ್ಮಶ್ರೀ ಪುರಸ್ಕೃತ ಕಲಾವಿದೆ ಮಾತಾ ಮಂಜಮ್ಮ ಜೋಗತಿ, ಈ ಗುಡೇಕೋಟೆ ಉತ್ಸವ ನೋಡಿ ಮನಸ್ಸಿಗೆ ತುಂಬಾ ಸಂತೋಷವಾಗಿದೆ. ಹಂಪಿ ಉತ್ಸವದ ರೂವಾರಿ ಎಂ.ಪಿ. ಪ್ರಕಾಶ ಅವರಂತೆ ಗುಡೇಕೋಟೆಯ ಉತ್ಸವದ ರೂವಾರಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಆಗಿದ್ದಾರೆ. ಮಹಿಳೆಯರ ಶೌರ್ಯದ ಸಂಕೇತವಾದ ಒನಕೆ ಓಬವ್ವನ ತವರೂರಲ್ಲಿ ನಡೆದಿರುವುದು ಸಮಾನತೆಯ ಉತ್ಸವವಾಗಿದೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಸ್ವಾಮೀಜಿ, ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ ಮಾತನಾಡಿದರು. ಜಿಪಂ ಸಿಇಒ ಸದಾಶಿವ ಪ್ರಭು, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಎಡಿಸಿ ಅನುರಾಧಾ, ಎಸಿ ನೋಂಗ್ಡಾಯ್ ಮಹಮದ್ ಅಕ್ರಂ ಶಾ, ಗ್ರಾಪಂ ಅಧ್ಯಕ್ಷ ಎನ್. ಕೃಷ್ಣ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ, ಒನಕೆ ಓಬವ್ವನ ವಂಶಸ್ಥ ಕುದುರೆಡುವು ನಾಗಣ್ಣ, ಗುಡೇಕೋಟೆ ಪಾಳೇಗಾರ ವಂಶಸ್ಥ ಶಿವರಾಜ ವರ್ಮ, ಜರಿಮಲೆ ಪಾಳೇಗಾರ ವಂಶಸ್ಥರಾದ ಸಿದ್ದಪ್ಪನಾಯಕ, ಕೃಷ್ಣವರ್ಮ ರಾಜ, ಮುಖಂಡರಾದ ರಾಘವೇಂದ್ರ ರಾವ್, ಶಿವಪ್ರಸಾದ ಗೌಡ, ವಿಶಾಲಾಕ್ಷಿ ರಾಜಣ್ಣ, ಎಂ. ಗುರುಸಿದ್ದನಗೌಡ, ಕೆ.ಜಿ. ಕುಮಾರಗೌಡ, ನಾಗಮಣಿ ಜಿಂಕಲ್, ಟಿ. ಉಮೇಶ್, ಪೇಂಟ್ ತಿಪ್ಪೇಸ್ವಾಮಿ ಸೇರಿ ಇತರರಿದ್ದರು.