ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್‌ಗೆ ಸಂಬಂಧಿಸಿದಂತೆ ೩ ಕೋಟಿ ರು.ಗೂ ಅಧಿಕ ಹಣ ದುರುಪಯೋಗವಾಗಿದೆ. ಈ ಹಣ ದುರುಪಯೋಗ ಸಂಬಂಧಿಸಿದಂತೆ ನಾಗಮಂಗಲ ತಹಸೀಲ್ದಾರ್ ಆಗಿದ್ದ ಕುಂ.ಇ.ಅಹಮದ್ ಸೇರಿದಂತೆ ನಾಲ್ವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಸರ್ಕಾರದ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.ನಾಗಮಂಗಲ ತಹಸೀಲ್ದಾರ್ ಆಗಿದ್ದ ಕುಂ.ಇ.ಅಹಮದ್, ಹಿಂದಿನ ಶಿರಸ್ತೇದಾರ್ ಪ್ರಕಾಶ್, ಶಿರಸ್ತೇದಾರ್ ಹರ್ಷ ಮತ್ತು ಹಿಂದಿನ ದ್ವಿತೀಯ ದರ್ಜೆ ಸಹಾಯಕಿ ಉಮಾ ಅವರು ಪ್ರಕೃತಿ ವಿಕೋಪ ಮತ್ತು ಕೋವಿಡ್-೧೯ಕ್ಕೆ ಸಂಬಂಧಿಸಿದ ಅನುದಾನ ಬಳಕೆಯಲ್ಲಿ ಕಚೇರಿ ಟಿಪ್ಪಣಿಗಳ ನಿರ್ವಹಣೆ ಮತ್ತು ವೆಚ್ಚಕ್ಕೆ ಸಂಬಂಧಿಸಿದ ಕಡತ, ಕಾರ್ಯಾದೇಶಗಳು, ಸೂಕ್ತ ರಸೀದಿ, ಓಚರ್ ಮತ್ತು ಪೂರಕ ದಾಖಲೆಗಳನ್ನು ನೀಡದೇ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಲೋಪವೆಸಗಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಈ ಎಲ್ಲಾ ವೈಫಲ್ಯಗಳಿಗೆ ವಿಷಯ ನಿರ್ವಾಹಕರು, ಶಾಖಾ ವ್ಯವಸ್ಥಾಪಕರು ಮತ್ತು ತಹಸೀಲ್ದಾರ್ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ಹಣ ದುರುಪಯೋಗವಾಗಿರುವ ಬಗ್ಗೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ದೂರು ಸಲ್ಲಿಸಿದ್ದರ ಕುರಿತಂತೆ ತನಿಖಾ ತಂಡವನ್ನು ರಚಿಸಿ ಪರಿಶೀಲಿಸಿ ವಾಸ್ತವಾಂಶಗಳ ವರದಿಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಕೋಟ್ಯಂತರ ರು. ಹಣ ಖಾಸಗಿ ವ್ಯಕ್ತಿಗಳ ಖಾತೆಗೆ:
ಪ್ರಕೃತಿ ವಿಕೋಪ ಶಾಖೆಯ ಚೆಕ್ ವಹಿಯಲ್ಲಿ ಡಿ.ದೇವರಾಜು ಎಂಬುವರ ಹೆಸರಿಗೆ ೫,೦೮,೨೦೦ ರು.ಗಳನ್ನು ವಿತರಿಸಲಾಗಿದ್ದು, ಚೆಕ್ ವಿತರಣಾ ಪುಸ್ತಕದಲ್ಲಿ ೨೪೨ ವಾಹನಗಳಿಗೆ ಈ ಹಣ ಪಾವತಿಯಾಗಿರುತ್ತದೆ ಎಂದು ದಾಖಲಿಸಲಾಗಿದೆ. ಆದರೆ, ನಾಗಮಂಗಲ ತಾಲೂಕು ಆರೋಗ್ಯ ಅಧಿಕಾರಿಗಳು ಒಟ್ಟು ೪೦ ಲಸಿಕಾ ವಾಹನಗಳ ಮಾಲೀಕರಿಗೆ ಹಣ ಪಾವತಿಸುವಂತೆ ಕೋರಿದ್ದು ಉಳಿದ ೨೦೧ ವಾಹನಗಳ ವಿವರಗಳು ಲಭ್ಯವಿರುವುದಿಲ್ಲವೆಂದು ತನಿಖಾ ತಂಡ ತಿಳಿಸಿದೆ.ವಾಹನಗಳ ಏಜೆಂಟ್ ಡಿ.ದೇವರಾಜ ೬.೧೧.೨೦೨೧ರಲ್ಲಿ ೨೨ ವಾಹನಗಳ ಬಾಡಿಗೆ ಪಾವತಿಸುವಂತೆ ತಹಸೀಲ್ದಾರ್ ಅವರನ್ನು ಕೋರಿ ಮನವಿ ಸಲ್ಲಿಸಿದ್ದು, ಇದರಲ್ಲಿ ಸ್ಥಳ ಪಿರಿಯಾಪಟ್ಟಣ ಎಂದು ನಮೂದಾಗಿದೆ. ಕೋವಿಡ್ ಲಸಿಕೆಗೆ ವಾಹನ ಸರಬರಾಜು ಮಾಡಿರುವ ಮಾಲೀಕರು ಡಿ.ದೇವರಾಜು ಎಂಬುದಕ್ಕೆ ನಾಗಮಂಗಲ ತಾಲೂಕು ಆರೋಗ್ಯ ಅಧಿಕಾರಿಗಳು ನೀಡಿರುವ ವಾಹನಗಳ ವಿವರಗಳಲ್ಲಿ ಮಾಹಿತಿ ಲಭ್ಯವಿರುವುದಿಲ್ಲ. ಆದರೂ ಡಿ.ದೇವರಾಜು ಹೆಸರಿಗೆ ೫,೦೮,೨೦೦ ರು. ಪಾವತಿಸಿರುವುದು ಕಂಡುಬಂದಿದೆ. ಹಾಗಾಗಿ ಈ ಹಣ ಖಾಸಗಿ ವ್ಯಕ್ತಿಗೆ ಪಾವತಿಯಾಗಿರುವುದು ಸ್ಪಷ್ಟವಾಗಿದೆ ಎಂದು ಹೇಳಿದೆ.
ಕೋವಿಡ್-೧೯ ಲಸಿಕಾ ಸಂಬಂಧ ಬಾಡಿಗೆ ಕರಾರು ವಾಹನಕ್ಕೆ ೫,೪೦,೦೦೦ ರು. ಡ್ರಾ ಮಾಡಿರುವ ಸಂಬಂಧ ೬ ವಾಹನಗಳಿಗೆ ತಲಾ ೯೦ ಸಾವಿರ ರು.ನಂತೆ ಒಟ್ಟಾರೆ ೫,೪೦,೦೦೦ ರು.ಗಳನ್ನು ಚೆಕ್ ಮೂಲಕ ಪಾವತಿಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು ತಹಸೀಲ್ದಾರ್ ಅವರಿಗೆ ವಾಹನಗಳನ್ನು ಉಪಯೋಗಿಸಿಕೊಂಡು ಹಣ ಪಾವತಿ ಮಾಡುವ ಕುರಿತಂತೆ ಯಾವುದೇ ಕೋರಿಕೆ ಪತ್ರ ವ್ಯವಹಾರಗಳು ಲಭ್ಯವಿಲ್ಲ. ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರಿಗೆ ೬ ಮಂದಿಗೆ ತಲಾ ೯೦ ಸಾವಿರ ರು. ಹಣವನ್ನು ಆರ್‌ಟಿಜಿಎಸ್ ಮೂಲಕ ಪ್ರಕೃತಿ ವಿಕೋಪ ಖಾತೆಯಿಂದ ಹಣ ಪಾವತಿಸಲು ಪತ್ರ ಬರೆದಿರುವ ಪ್ರತಿ ಲಭ್ಯವಿದ್ದು, ಇದೂ ಕೂಡ ಖಾಸಗಿ ವ್ಯಕ್ತಿಗಳಿಗೆ ಹಣ ಪಾವತಿಯಾಗಿರುವುದು ಕಂಡುಬಂದಿದೆ.ಹಣ ಪಾವತಿಸಿರುವುದಕ್ಕೆ ದಾಖಲೆಗಳೇ ಇಲ್ಲ:
ಕೋವಿಡ್ ಲಸಿಕಾ ಮೇಳಕ್ಕೆ ಎನ್.ಆರ್.ಮಹೇಶ್ ಅವರ ಖಾಸಗಿ ಖಾತೆಗೆ ೩,೫೮,೮೦೦ ರು.ಗಳನ್ನು ಆರ್‌ಟಿಜಿಎಸ್ ಮೂಲಕ ಪಾವತಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ಯಾವ ಉದ್ದೇಶಕ್ಕೆ ಹಣ ಪಾವತಿಸಿದ್ದಾರೆ ಎನ್ನುವುದಕ್ಕೆ ತನಿಖಾ ಸಮಯದಲ್ಲಿ ಪೂರಕ ದಾಖಲೆಗಳನ್ನು ಒದಗಿಸಿಲ್ಲ ಎಂದು ತನಿಖಾ ತಂಡ ತಿಳಿಸಿದೆ.ಕೋವಿಡ್ ಲಸಿಕಾ ವಾಹನ ಬಾಡಿಗೆಗೆ ೧,೮೦,೦೦೦ ರು. ಪಾವತಿಸಿದ್ದು, ಈ ಹಣವನ್ನು ೬ ಚೆಕ್‌ಗಳ ಮೂಲಕ ತಲಾ ೩೦ ಸಾವಿರ ರು.ನಂತೆ ಪಾವತಿಸಲಾಗಿದ್ದು, ಇದಕ್ಕೂ ಯಾವುದೇ ದಾಖಲೆಗಳಿಲ್ಲವೆಂದು ಹೇಳಿದೆ.
ಕಚೇರಿ ಟಿಪ್ಪಣಿಗೆ ಅಂದಿನ ಪ್ರಕೃತಿ ವಿಕೋಪ ವಿಷಯ ನಿರ್ವಾಹಕರಾದ ದರ್ಶನ್ ರಾವಣೀಕರ್ ಹಾಗೂ ಪ್ರಕೃತಿ ವಿಕೋಪದ ಅಂದಿನ ಶಾಖಾ ಮುಖ್ಯಸ್ಥ ಪಿ.ಪ್ರಕಾಶ್ ಅವರು ಯಾವುದೇ ಸಹಿ ಮಾಡದಿದ್ದರೂ ಅಂದಿನ ತಹಸೀಲ್ದಾರ್ ಕುಂ.ಇ.ಅಹಮದ್ ಮಾತ್ರ ಎಲ್ಲಾ ಕಂಡಿಕೆಗಳಿಗೆ ಅನುಮೋದನೆ ನೀಡಿರುವುದು ದಾಖಲೆಗಳಿಂದ ತಿಳಿದುಬಂದಿದೆ.ಫಲಾನುಭವಿಗಳ ವಿವರಗಳಿಲ್ಲ:
ಮಳೆ ಹಾನಿಯಿಂದ ಸಂತ್ರಸ್ತರಾದ ೧೦೫ ಫಲಾನುಭವಿಗಳಿಗೆ ೮೦,೬೨,೦೬೯ ರು.ಗಳ ಪರಿಹಾರ ಪಾವತಿ ಬಗ್ಗೆ ವಿವರಣೆ ಹಾಗೂ ಫಲಾನುಭವಿಗಳ ವಿವರವನ್ನು ಆರ್‌ಜಿಎಚ್‌ಸಿಎಲ್ ಪೋರ್ಟಲ್‌ನಲ್ಲಿ ದಾಖಲು ಮಾಡದಿರುವ ಕುರಿತು ಯಾವುದೇ ಕಡತ, ದಾಖಲೆಗಳನ್ನು ಹಾಜರುಪಡಿಸಿಲ್ಲ. ಪ್ರಕೃತಿ ವಿಕೋಪ ಶಾಖೆಯ ಚೆಕ್ ವಿತರಣಾ ವಹಿಯಲ್ಲಿ ಚೆಕ್ ಪಡೆದ ವ್ಯಕ್ತಿಗಳ ವಿವರಗಳಿಲ್ಲ ಮತ್ತು ಪೂರಕ ದಾಖಲೆಗಳನ್ನು ಒದಗಿಸಿಲ್ಲ ಮತ್ತು ೨೨,೪೨,೩೪೦ ರು.ಗಳ ಖರ್ಚಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಲಭ್ಯವಿಲ್ಲವೆಂದು ತಿಳಿಸಲಾಗಿದೆ.ಉಮಾಗೆ ಹಿಂಬಡ್ತಿ:
ಜಿಲ್ಲಾಧಿಕಾರಿಗಳು ೭.೧.೨೦೨೩ರಲ್ಲಿ ಮಾಡಿರುವ ಆದೇಶದಂತೆ ದ್ವಿತೀಯ ದರ್ಜೆ ಸಹಾಯಕಿ ಎಸ್.ಎಂ.ಉಮಾ ಅವರು ಪ್ರಕೃತಿ ವಿಕೋಪ ಶಾಖೆಗೆ ಬಿಡುಗಡೆಯಾದ ಅನುದಾನವನ್ನು ಖರ್ಚು- ವೆಚ್ಚ ಮಾಡಿರುವ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಕರ್ತವ್ಯ ಲೋಪದಡಿ ಅಮಾನತುಗೊಳಿಸಲಾಗಿದೆ. ನಂತರದಲ್ಲಿ ಉಮಾ ಅವರನ್ನು ಪ್ರಥಮ ದರ್ಜೆ ಸಹಾಯಕಿ ಹುದ್ದೆಯಿಂದ ಹಿಂಬಡ್ತಿಗೊಳಿಸಿ ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತನಿಖಾ ತಂಡ ಹೇಳಿದೆ.ಅದರಂತೆ ನಾಗಮಂಗಲ ತಹಸೀಲ್ದಾರ್ ಆಗಿದ್ದ ಕುಂ.ಇ.ಅಹಮದ್, ಹಿಂದಿನ ಶಿರಸ್ತೇದಾರ್ ಪ್ರಕಾಶ್, ಶಿರಸ್ತೇದಾರ್ ಹರ್ಷ ಮತ್ತು ಹಿಂದಿನ ದ್ವಿತೀಯ ದರ್ಜೆ ಸಹಾಯಕಿ ಉಮಾ ಅವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು ೧೯೫೭ ನಿಯಮ-೨ರ ರೀತ್ಯಾ ತಪ್ಪಿತಸ್ಥರ ಅಧಿಕಾರಿಗಳು, ನೌಕರರ ನೇಮಕಾತಿ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ವರದಿ ಮತ್ತು ದಾಖಲೆಗಳನ್ನು ಸಲ್ಲಿಸಿದ್ದಾರೆ.
----------------------‘ನಾಗಮಂಗಲ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ 3 ಕೋಟಿ ರು.ಗೂ ಹೆಚ್ಚು ಹಣ ದುರುಪಯೋಗವಾಗಿದೆ. ತಪ್ಪಿತಸ್ಥ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ನಾಗಮಂಗಲ ತಾಲೂಕು ಮಾದರಿಯಲ್ಲೇ ಉಳಿದ ತಾಲೂಕುಗಳಲ್ಲೂ ಅಕ್ರಮ ನಡೆದಿದ್ದು ಅದನ್ನೂ ತನಿಖೆಗೊಳಪಡಿಸಬೇಕು.’
-ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ.