ಈದ್ಗಾ ಮೈದಾನದಲ್ಲಿ 3 ದಿನ ಗಣೇಶೋತ್ಸವ

| Published : Aug 25 2025, 01:00 AM IST

ಸಾರಾಂಶ

ಗಣೇಶೋತ್ಸವ ಆಚರಿಸಲು ಅನುಮತಿ ನೀಡುವಂತೆ ಕೋರಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸೇರಿದಂತೆ ಎರಡು ಸಂಘಟನೆಗಳು ಅರ್ಜಿ ಬಂದಿದ್ದವು. ಇದರಲ್ಲಿ ಒಂದು ಸಂಘಟನೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ (ರಾಣಿ ಚೆನ್ನಮ್ಮ ಮೈದಾನ) ಗಣೇಶೋತ್ಸವ ಆಚರಿಸುವುದಕ್ಕೆ ಮಹಾನಗರ ಪಾಲಿಕೆ ಅನುಮತಿ ನೀಡಿದೆ.

ಕಳೆದ 3 ವರ್ಷದಿಂದ ಗಣೇಶೋತ್ಸವ ಆಚರಿಸಿದ್ದ ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಗೇ ಈ ಸಲವೂ ಅನುಮತಿ ದೊರೆತಿದೆ. 3 ದಿನವಷ್ಟೇ ಗಣೇಶೋತ್ಸವ ಆಚರಿಸಬೇಕು. ಮಧ್ಯಾಹ್ನ 12ರೊಳಗೆ ವಿಸರ್ಜನೆ ಮಾಡುವುದು ಸೇರಿದಂತೆ 10ಕ್ಕೂ ಹೆಚ್ಚು ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ.

ಮೊದಲ ಎರಡು ವರ್ಷ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಕುರಿತಂತೆ ಸಾಕಷ್ಟು ಹೋರಾಟಗಳು ಆಗಿದ್ದವು. ಕೋರ್ಟ್ ಮೆಟ್ಟಿಲು ಕೂಡಾ ಏರಿತ್ತು. ಕೊನೆಗಳಿಗೆಯಲ್ಲಿ ಅನುಮತಿ ಸಿಗುತ್ತಿತ್ತು. ದೇಶಾದ್ಯಂತ ಈದ್ಗಾ ಮೈದಾನ ಗಣೇಶೋತ್ಸವ ಭಾರೀ ಸದ್ದು ಮಾಡಿತ್ತು. ಕಳೆದ ವರ್ಷದಿಂದ ಮುಂಚಿತವಾಗಿಯೇ ಅನುಮತಿ ದೊರಕಿತ್ತು. ಈ ವರ್ಷ ಕೂಡ ಮೂರು ದಿನ‌ ಮುಂಚಿತವಾಗಿಯೇ ಅನುಮತಿ ಪಡೆದಿರುವ ಸಂಘಟನೆ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಿದೆ.

ಗಣೇಶೋತ್ಸವ ಆಚರಿಸಲು ಅನುಮತಿ ನೀಡುವಂತೆ ಕೋರಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸೇರಿದಂತೆ ಎರಡು ಸಂಘಟನೆಗಳು ಅರ್ಜಿ ಬಂದಿದ್ದವು. ಇದರಲ್ಲಿ ಒಂದು ಸಂಘಟನೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ರಾಣಿಚೆನ್ನಮ್ಮ ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ್, ನಮ್ಮ ಸಂಘಟನೆಗೆ ಅನುಮತಿ ಸಿಕ್ಕಿದೆ. ಷರತ್ತುಗಳಿಗೆ ಬದ್ಧವಾಗಿ ಗಣೇಶೋತ್ಸವ ಆಚರಿಸುತ್ತೇವೆ ಎಂದು ತಿಳಿಸಿದರು. ಕಳೆದ ವರ್ಷ ಏನೇನು ಷರತ್ತುಗಳನ್ನು ವಿಧಿಸಲಾಗಿತ್ತೋ ಅದೇ ಷರತ್ತುಗಳನ್ನು ವಿಧಿಸಲಾಗಿದೆ. ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಆ. 27 ರಂದು ಬೆಳಗ್ಗೆ 9ಕ್ಕೆ ಮೂರುಸಾವಿರ ಮಠದಿಂದ ಮೆರವಣಿಗೆ ಮೂಲಕ ಗಣೇಶನನ್ನು ತಂದು ಪ್ರತಿಷ್ಠಾಪಿಸಲಾಗುವುದು ಎಂದು ಬಡಸ್ಕರ್ ತಿಳಿಸಿದರು.