ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಮೇಳಕ್ಕೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಶನಿವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಮೇಳಕ್ಕೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಶನಿವಾರ ಚಾಲನೆ ನೀಡಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಸಿಬಿಬಿಒ ಜೇನು ರೈತ ಉತ್ಪಾದಕರ ಸಂಘ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಡಾ.ದಂಡಿನ ಶಿಕ್ಷಣ ಮತ್ತು ಸಂಶೋಧನೆ ಪ್ರತಿಷ್ಟಾನದ ಸಹಯೋಗದಲ್ಲಿ ಹಮ್ಮಿಕೊಂಡ ಮಾವು ಮೇಳಕ್ಕೆ ಚಾಲನೆ ನೀಡಿ, ವಿವಿಧ ಮಾವು ತಳಿಗಳನ್ನು ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು ಮಾವು ಬೆಳೆಗಾರರಿಗೆ ಉತ್ತೇಜನ ನೀಡುವುದು ಹಾಗೂ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮಾವು ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಮಾವು ಬೆಳೆಗೆ ಉತ್ತಮ ಅವಕಾಶಗಳಿದ್ದು, ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ತೋವಿವಿ ಮುಂದಿನ ದಿನಗಳಲ್ಲಿ ಮಾವು ನಿಗಮ ಸ್ಥಾಪಿಸುವ ಕೆಲಸ ಮಾಡಬೇಕಿದೆ. ವಿಶ್ವವಿದ್ಯಾಲಯದಲ್ಲಿ ಮಾವಿನ ತಳಿಗಳ ತಂತ್ರಜ್ಞಾವನ್ನು ತ್ವರಿತವಾಗಿ ಮಾಡಲಾಗುತ್ತಿದೆ. ವಿವಿಧ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜನೆ ಮಾಡಿದೆ. ಇದರ ಜೊತೆಗೆ ಚಿಕ್ಕಲಗುಂಡಿಯಲ್ಲಿ ರೈತರು ಬೆಳೆದ ಮಾವಿನ ತಳಿಯ ಬಗ್ಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಹೇಳಿದರು.

ಭಾರತ ದೇಶ ಸೇರಿ 84 ದೇಶಗಳಲ್ಲಿ ಮಾವು ಬೆಳೆಯುತ್ತಿದ್ದಾರೆ. ಬೆಳೆದಿರುವ ಮಾವನ್ನು ಕಾರ್ಬನ್ ಮುಕ್ತವಾಗಿ ಮಾಡುವ ವ್ಯವಸ್ಥೆಯಿಂದ 500 ವಿಧದ ತಳಿಗಳು ಬಂದಿವೆ. 22 ಮಾವು ಬೆಳೆಯ ಹೊಸ ತಳಿ ಕಂಡುಹಿಡಿದ್ದು, ಅವು ಯಶಸ್ವಿಯಾಗಿವೆ. ಹೆಚ್ಚು ಹೆಚ್ಚು ಮಾವು ಬೆಳೆಯುವ ಮೂಲಕ ಉತ್ತರ ಕರ್ನಾಟಕ ರೈತರು ಮುಂದೆ ಬರಬೇಕು ಎಂದು ಕರೆ ನೀಡಿದ ಅವರು, ತೋವಿವಿಯ ಮೂಲಕ ಮಾವು ಸಂಶೋಧನಾ ಕೇಂದ್ರ ಸ್ಥಾಪನೆಗೆ ಸರಕಾರ ಮಟ್ಟದಲ್ಲಿ ಚರ್ಚಿಸಲಾಗುವುದು. ಈ ಮೂರು ದಿನಗಳ ಕಾಲ ನಡೆಯುವ ಮಾವು ಮೇಳಕ್ಕೆ ಆಗಮಿಸಿ ರೈತರು ಬೆಳೆದ ಮಾವು ಖರಿದೀಸಬೇಕೆಂದರು.

ತೋಟಗಾರಿಕೆ ವಿವಿಯ ಕುಲಪತಿ ಡಾ.ತಮ್ಮಯ್ಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ಕಲಾದಗಿ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಟಿ. ಪಾಟೀಲ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು, ಪ್ರಗತಿಪರ ರೈತ ಮೋಹನ ದೇಸಾಯಿ, ಮಾಜಿ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಪಿ.ಎಂ. ದೇಸಾಯಿ, ತೋವಿವಿಯ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ವಸಂತ ಗಾಣಿಗೇರ ಇತರರು ಉಪಸ್ಥಿತರಿದ್ದರು.ವಿವಿಧ ಉತ್ಪನ್ನಗಳ ಪ್ರದರ್ಶನ:

ಮಾವು ಮೇಳದಲ್ಲಿ 100ಕ್ಕೂ ಹೆಚ್ಚು ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರತ್ನಗಿರಿ, ದೇವಗಡ, ಧಾರವಾಡ ಅಪೂಸ್, ಮಲ್ಲಿಕಾ, ಆರ್ಕಾನೀಲಕಿರಣ, ಆರ್ಕಾ ಉದಯ, ಅಮ್ರಪಲ್ಲಿ, ಸಿಂಧು, ನೀಲಂ, ರತ್ನಾ, ದಾಶೇಕರಿ, ಟಾಮ್ಮಿ ಆಟಕಿನ್ಸ್, ಖದರ್, ಪೈರಿ, ತೋತಾಪುರಿ, ಸುಂದರಶಾ ಸೇರಿ ಇತರೆ ತಳಿ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತು. ಮಾವಿನಿಂದ ತಯಾರಿಸಲಾದ ಮೌಲ್ಯವರ್ಧಿತ ಉತ್ಪನ್ನಗಳಾದ ಮಾವಿನ ಜ್ಯಾಮ್‌, ಜ್ಯೂಸ್, ಉಪ್ಪಿನಕಾಯಿ, ಫಲ್ಫ್, ಒಣಮಾವು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಮಾವು ನಮ್ಮ ದೇಶದ ಹಣ್ಣುಗಳ ರಾಜ ಹಾಗೂ ವಾಣಿಜ್ಯ ಬೆಳೆಯಾಗಿದ್ದು, ಕರ್ನಾಟಕದಲ್ಲಿ ತುಂಬಾ ಪ್ರಚಲಿತವಿರುವ ಹಣ್ಣುಗಳಲ್ಲಿ 1500ಕ್ಕೂ ಹೆಚ್ಚಿನ ತಳಿಗಳು ನಮ್ಮ ಭಾರತ ದೇಶದಲ್ಲಿವೆ. ಉತ್ತರ ಕನರ್ಾಟಕದಲ್ಲಿ ಸಹ ಬಹಳಷ್ಟು ವೈವಿದ್ಯಮಯ ತಳಿಗಳನ್ನು ನೋಡಬಹುದಾಗಿದೆ. ವೈವಿದ್ಯಮಯ ಮಾವು ತಳಿಗಳನ್ನು ಪರಿಚಯಿಸುವ ಉದ್ದೇಶದಿಂದ ಮಾವು ಮೇಳ ಸಂಘಟಿಸಲಾಗಿದೆ. ನಮ್ಮ ಪೂರ್ವಿಕರು ಅನೇಕ ತಳಿಗಳು ಬೆಳೆದಿದ್ದು, ಅವುಗಳೆಲ್ಲವೂ ಇಂದು ಕಣ್ಮರೆಯಾಗುವ ಹಂತದಲ್ಲಿವೆ. ಅವುಗಳನ್ನು ಸಹ ಈ ಮೇಳದಲ್ಲಿ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.

-ಡಾ.ವಸಂತ ಗಾಣಿಗೇರ, ತೋವಿವಿಯ ಸಹ ಸಂಶೋಧಕ ಮತ್ತು ವಿಸ್ತರಣಾ ನಿರ್ದೇಶಕ