ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಏಷ್ಯಾನೆಟ್ ಸುವರ್ಣ ನ್ಯೂಸ್’ ಹಾಗೂ ‘ಕನ್ನಡಪ್ರಭ’ ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಕಳೆದ ಮೂರು ದಿನಗಳ ನಡೆದ ಬೆಂಗಳೂರಿನ ಅತಿದೊಡ್ಡ ಫುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್ ‘ಯಲಹಂಕ ಸಂಭ್ರಮ’ಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿದೆ.ಯಲಹಂಕ ಸಂಭ್ರಮದ ಮೂರನೇ ದಿನವಾದ ಭಾನುವಾರವೂ ಭಾರೀ ಸಂಖ್ಯೆಯ ಜನರು ಆಗಮಿಸಿ ಮಸ್ತಿಯಲ್ಲಿ ತೊಡಗಿದ್ದರು. ಮಕ್ಕಳು ಆಟಿಕೆಗಳೊಂದಿಗೆ ಚಿನ್ನಾಟವಾಡುತ್ತಿದ್ದರೆ, ಗೃಹಿಣಿಯರು ಗೃಹೋಪಯೋಗಿ ವಸ್ತುಗಳು, ಲೈಫ್‌ಸ್ಟೈಲ್ ಮಳಿಗೆಗಳಿಗೆ ತೆರಳಿ ಖರೀದಿಯಲ್ಲಿ ತೊಡಗಿದ್ದರು.
ಭಾನುವಾರ ಮಕ್ಕಳಿಗಾಗಿ ಆಯೋಜಿಸಿದ್ದ ಮುದ್ದು ಮಗು ಮತ್ತು ವೇಷಭೂಷಣ, ಬೆಂಕಿರಹಿತ ಅಡುಗೆ ಸ್ಪರ್ಧೆಯಲ್ಲಿ ಹತ್ತಾರು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಅಡುಗೆ ಮಹಾರಾಣಿ ಅಂತಿಮ ಹಂತದ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಓಪನ್ ಸ್ಟೇಜ್ ಮತ್ತು ಗಾಯನ ನಡೆಯಿತು. ಅಂತಿಮವಾಗಿ ಸಂಜೆ ವಿವಿಧ ಸರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಬಹುಮಾನ ವಿತರಣೆ ಮಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.ಬಳಿಕ ಕಿಡ್ಸ್ ಮತ್ತು ಫ್ಯಾಮಿಲಿ ಫ್ಯಾಶನ್, ನೃತ್ಯ ಮತ್ತು ಮನೋರಂಜನಾ ಕಾರ್ಯಕ್ರಮದೊಂದಿಗೆ ಮೂರು ದಿನದ ‘ಯಲಹಂಕ ಸಂಭ್ರಮ’ ಮುಕ್ತಾಯವಾಯಿತು.
ಗೌರಿ ಚಿತ್ರ ತಂಡದಿಂದ ಭರ್ಜರಿ ಡ್ಯಾನ್ಯಲಹಂಕ ಸಂಭ್ರಮದ ಕೊನೆಯ ದಿನದ ಕಾರ್ಯಕ್ರಮಕ್ಕೆ ಗೌರಿ ಚಿತ್ರತಂಡದ ನಾಯಕ ಸಮರ್ಜಿತ್, ನಾಯಕಿ ಸಾನ್ಯಾ ಅಯ್ಯರ್ ಆಗಮಿಸಿ, ಸಂಭ್ರಮದ ವೇದಿಕೆಯ ಮೇಲೆ ಭರ್ಜರಿ ನೃತ್ಯ ಪ್ರದರ್ಶನ ನೀಡಿ ರಂಜಿಸಿದೆ.
ಯಶಸ್ವಿಗೆ ಸಾಕ್ಷಿಯಾದ ಜನಸಾಗರ:ಜು.12ರಿಂದ 14 ವರೆಗೆ ನಡೆದ ಯಲಹಂಕ ಸಂಭ್ರಮದಲ್ಲಿ ಹಾಕಿದ್ದ ಮಳಿಗೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಮಾತ್ರವಲ್ಲ ಮಕ್ಕಳ ಆಟಿಕೆಗಳು, ಕಾರು, ಸೈಕಲ್ ಶೋರೂಂಗಳು, ಬಗೆ ಬಗೆಯ ಆಹಾರ ಪದಾರ್ಥಗಳ ಮಳಿಗೆಗಳು ಪ್ರತಿಯೊಬ್ಬರ ಗಮನ ಸೆಳೆಯುತ್ತಿದ್ದವು. ಬಿಸಿ ಬಿಸಿ ಎಣ್ಣೆಯಲ್ಲಿ ಅದ್ದಿ ತೆಗೆದ ಪೊಟ್ಯಾಟೋ ಟ್ವಿಸ್ಟರ್, ಸಂಜೆಯ ಬಿಸಿ ಟೀ ಜೊತೆ ಮೆಲ್ಲಲು ತಯಾರಾದ ಬಿಸಿ ಬಿಸಿ ಪಡ್ಡು, ಬೋಂಡಾ, ಬಾಯಲ್ಲಿಟ್ಟರೆ ಕರಗುವ ದಾವಣಗೆರೆ ಬೆಣ್ಣೆ ದೋಸೆ, ಮುಳಬಾಗಿಲು ಮಸಾಲೆದೋಸೆ, ಆರಾಧ್ಯ ಕರದಂಟು, ಮೇಲುಕೋಟೆಯ ಪುಳಿಯೊಗರೆ, ಅಯ್ಯಂಗಾರ್ ಪುಳಿಯೊಗರೆ, ಬಗೆಬಗೆಯ ಖಾದ್ಯಗಳು ತಿಂಡಿಪ್ರಿಯರಿಗೆ ಇಷ್ಟವಾದವು. ಗುಡಿ ಕೈಗಾರಿಕೆಯಡಿ ಗ್ರಾಮಗಳಿಂದ ಆಗಮಿಸಿದ್ದ ಸ್ತ್ರೀಶಕ್ತಿ ಸಂಘದ ಹಲವು ತಂಡಗಳು ವಿವಿಧ ಖಾದ್ಯಗಳು ಜನರನ್ನು ಕೈ ಬೀಸಿ ಕರೆಯುವ ಮೂಲಕ ಯಶಸ್ವಿಗೊಳಿಸಿದ್ದಾರೆ.