ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ತಾಂತ್ರಿಕ ಸಮಸ್ಯೆ ನಿವಾರಣೆಗೆ ಡಿ.೨೭ರಿಂದ ೨೯ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕ್ಯಾಂಪ್ಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಧಾರ್ ಜೋಡಣೆ ಸಮಸ್ಯೆ, ಬ್ಯಾಂಕಿಗೆ ಸಂಬಂಧಿಸಿದ ಸಮಸ್ಯೆ, ಇ-ಕೆವೈಸಿ ಅಪ್ಡೆಟ್, ಹೊಸ ಬ್ಯಾಂಕ್ ಖಾತೆ ಆರಂಭ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಫಲಾನುಭವಿಗಳ ಖಾತೆಗೆ ಸುಗಮವಾಗಿ ಹಣ ಜಮಾವಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಗೃಹ ಲಕ್ಷ್ಮೀ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರನ್ನು ಸಬಲೀಕಣಗೊಳಿಸುವ ನಿಟ್ಟಿನಲ್ಲಿ ಮಹಿಳಾ ಕುಟುಂಬ ಮುಖ್ಯಸ್ಥರು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ₹೨ ಸಾವಿರ ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡುಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯದ ಸುಮಾರು ೨.೫೦ ಲಕ್ಷ ಫಲಾನುಭವಿಗಳು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡದೇ ಇರುವುದು ಮತ್ತು ಸುಮಾರು ೭೦ ಸಾವಿರ ನಿಷ್ಕ್ರಿಯ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿರುವುದು ಕಂಡು ಬಂದಿರುತ್ತದೆ. ಜಿಲ್ಲೆಯಲ್ಲಿ ೧೬೩೩ ಫಲಾನುಭವಿಗಳ ಇ-ಕೆವೈಸಿ ಜೋಡಣೆ, ೨೦೭೨ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾವಣೆ ವಿಫಲವಾಗಿರುವ ಸಮಸ್ಯೆಗಳು ಕಂಡುಬಂದಿದೆ. ಒಟ್ಟಾರೆ ೪೩೫೩ ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆಗೆ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದಿದ್ದಾರೆ.
ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಈ ಫಲಾನುಭವಿಗಳಿಗೆ ಹೊಸ ಬ್ಯಾಂಕ್ ಖಾತೆ ತೆರೆಯಲು ಇಚ್ಚಿಸಿರುವುದು ಗಮನಕ್ಕೆ ಬಂದಿರುತ್ತದೆ. ಬಹಳಷ್ಟು ಫಲಾನುಭವಿಗಳು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಸುಗಮೊಳಿಸಲು ಬ್ಯಾಂಕ್ ಖಾತೆಗಳಿಗೆ ಅಧಾರ್ ಜೋಡಣೆ ಮಾಡುವುದು ಅಗತ್ಯವಿರುತ್ತದೆ. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ಗಳನ್ನು ಆಯೋಜಿಸಲು ಜಿಲ್ಲೆಯಲ್ಲಿ ಸಿದ್ದತೆ ನಡೆದಿದ್ದು, ಡಿ.೨೭ರಿಂದ ೨೯ರವರೆಗೆ ಜಿಲ್ಲೆಯ ೨೨೩ ಗ್ರಾಪಂಗಳಲ್ಲಿ ವಿಶೇಷ ಕ್ಯಾಂಪ್ ಹಮ್ಮಿಕೊಂಡು ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಸಹಾಯಕ್ಕೆ ಸರ್ಕಾರವು ಮುಂದಾಗಿದೆ ಎಂದು ತಿಳಿಸಿದ್ದಾರೆ.ಕ್ಯಾಂಪ್ ವಿಶೇಷತೆ: ಜಿಲ್ಲೆಯ ಪ್ರತಿ ಗ್ರಾಪಂನಲ್ಲಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಕ್ಯಾಂಪ್ಗಳನ್ನು ಆಯೋಜಿಸಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಕ್ಯಾಂಪ್ನಲ್ಲಿಯೇ ಪರಿಹರಿಸಲಾಗುವುದು. ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಗಣಕಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಡಿಸಿ ತಂಡ ಈ ಕ್ಯಾಂಪ್ನಲ್ಲಿ ಭಾಗವಹಿಸಲಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ಗಳ ಪ್ರತಿನಿಧಿಗಳು ಈ ಕ್ಯಾಂಪ್ನಲಿ ಭಾಗವಹಿಸಿ ನೆರವಾಗಲಿದ್ದಾರೆ.
ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ನಿವಾರಣೆ ಕ್ಯಾಂಪಿನಲ್ಲಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಲಾಗುವುದು. ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ ಮಾಡಲಾಗುವುದು. ಇ-ಕೆವೈಸಿ ಅಪ್ಡೆಟ್ ಮಾಡಲಾಗುವುದು. ಗೃಹಲಕ್ಷ್ಮೀ ಅರ್ಜಿಯ ಸ್ಥಿತಿ ಪರಿಶೀಲಿಸಲಾಗುವುದು. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಪರಿಹರಿಸುವುದು. ಕ್ಯಾಂಪ್ ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಜರುಗಲಿದೆ.ತಾಂತ್ರಿಕ ಸಮಸ್ಯೆಯಿಂದ ಬ್ಯಾಂಕ್ ಖಾತೆಗೆ ಹಣ ಜಮೆಯಾಗದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ ಹಾಗೂ ಗಂಡನ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ಬುಕ್ ದಾಖಲೆಗಳನ್ನು ತೆಗೆದುಕೊಂಡು ಕ್ಯಾಂಪ್ಗೆ ಹಾಜರಾಗಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕ್ಷೇತ್ರಮಟ್ಟದ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರನ್ನು ಕ್ಯಾಂಪ್ಗಳಿಗೆ ಕರೆ ತರುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಇಡಿಸಿಎಸ್ ಮೂಲಕ ಎಸ್.ಎಂ.ಎಸ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.