ತುಮಕೂರಿನಲ್ಲಿ ಇತ್ತೀಚೆಗೆ ನಡೆದ ನಾಡಬಾಂಬ್ ಸ್ಫೋಟದ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಂಕೋಲಾ ಪೊಲೀಸರು, ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕಚ್ಚಾ ನಾಡಬಾಂಬ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರವಾರ: ತುಮಕೂರಿನಲ್ಲಿ ಇತ್ತೀಚೆಗೆ ನಡೆದ ನಾಡಬಾಂಬ್ ಸ್ಫೋಟದ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಂಕೋಲಾ ಪೊಲೀಸರು, ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕಚ್ಚಾ ನಾಡಬಾಂಬ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಜೂನ್ 30ರಂದು ಅಂಕೋಲಾ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ಮಠಪತಿ ಹಾಗೂ ಸಿಬ್ಬಂದಿ ಹಟ್ಟಿಕೇರಿ ಭಾಗದಲ್ಲಿ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಹೊನ್ನಳ್ಳಿ ಗ್ರಾಮದ ನಾರಾಯಣಗೌಡ ಮತ್ತು ನಾಗರಾಜ್ ಗೌಡ ಎಂಬುವವರು ಅಕ್ರಮವಾಗಿ ಕಚ್ಚಾ ನಾಡಬಾಂಬ್‌ಗಳನ್ನು ಹೊಂದಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಆ್ಯಂಟಿ ಸಬೋಟೇಜ್ ಚೆಕ್ ಟೀಮ್ ಅನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದರು.ಪೊಲೀಸರು ಹೊನ್ನಳ್ಳಿಯ ನಾರಾಯಣಗೌಡನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯ ಬಯಲಾಗಿದೆ. ಆರೋಪಿಗಳು ಮೊದಲು ಮೀನು ಹಿಡಿಯಲು ಬಾಂಬ್ ತಂದಿರುವುದಾಗಿ ಒಪ್ಪಿಕೊಂಡರು. ಆದರೆ, ಕೆಲವು ದಿನಗಳ ಹಿಂದಷ್ಟೇ ಇವರ ಸಂಬಂಧಿ ನಾಗೇಂದ್ರ ಗೌಡ ತುಮಕೂರಿನಲ್ಲಿ ನಾಡಬಾಂಬ್ ಸ್ಫೋಟಗೊಂಡು ಮೃತಪಟ್ಟ ಹಿನ್ನೆಲೆಯಲ್ಲಿ, ಹೆದರಿದ ಆರೋಪಿಗಳು ತಮ್ಮಲ್ಲಿದ್ದ ಬಾಂಬ್‌ಗಳನ್ನು ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿರುವುದಾಗಿ ತಿಳಿಸಿದರು. ನಂತರ ಆರೋಪಿಗಳು ತೋರಿಸಿದ ಅರಣ್ಯದ ಸ್ಥಳದಿಂದ ಮೂರು ಜೀವಂತ ಕಚ್ಚಾ ನಾಡಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡರು.
ಈ ಬಾಂಬ್‌ಗಳನ್ನು ಶಿರಗುಂಜಿಯ ಸಂದೀಪ್ ಗೌಡ ಎಂಬಾತ ನೀಡಿದ್ದ ಎಂದು ಬಂಧಿತರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೊನ್ನಳ್ಳಿಯ ನಾರಾಯಣಗೌಡ, ನಾಗರಾಜ್ ಗೌಡ ಹಾಗೂ ಬಾಂಬ್ ಸರಬರಾಜು ಮಾಡಿದ ಶಿರಗುಂಜಿಯ ಸಂದೀಪ್ ಗೌಡ ಎಂಬ ಮೂವರನ್ನು ಬಂಧಿಸಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ಜಪ್ತಿಯಾದ ಸ್ಫೋಟಕಗಳನ್ನು ವಿಶೇಷ ಸಂಗ್ರಹಾಲಯಕ್ಕೆ ರವಾನಿಸಲಾಗಿದೆ.ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆ 1908 ಕಲಂ 4, 5 ಹಾಗೂ ಬಿ.ಎನ್.ಎಸ್ ಕಲಂ 288ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಬಾಂಬ್ ತಯಾರಿಕೆ ಮತ್ತು ಮಾರಾಟ ಮಾಡುವ ಜಾಲದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತುಮಕೂರು ದುರಂತದ ನಂತರ ಜಿಲ್ಲೆಯಲ್ಲಿ ಸ್ಫೋಟಕಗಳ ಕುರಿತು ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.