ಸಾರಾಂಶ
ಪಾರ್ಟಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ । ಐವರಿಗೆ ಗಾಯ । ಬೆಳ್ಳಂದೂರು, ಹೆಣ್ಣೂರು, ವೈಟ್‌ಫೀಲ್ಡ್ ಠಾಣಾವ್ಯಾಪ್ತಿಯಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಬೆಂಗಳೂರುಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುವಾಗ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಟೆಕ್ಕಿ ಸೇರಿ ಮೂವರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆಗಳು ನಡೆದಿವೆ.
ಏಕಮುಖ ಸಂಚಾರದ ರಸ್ತೆಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬೆಳ್ಳಂದೂರು ನಿವಾಸಿ ರವಿ ಕಾರ್ತಿಕೇಯ (29) ಮೃತ ಟೆಕ್ಕಿ. ಈತನ ಸ್ನೇಹಿತರಾದ ಅರ್ಬಾಜ್ ಖಾನ್, ಜೇವಾ, ಗಾರ್ಗಿ ಗುಪ್ತಾ ಹಾಗೂ ಆಟೋ ಚಾಲಕ ಶಾಕೀಬ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಭಾನುವಾರ ತಡರಾತ್ರಿ 12.20ರ ಸುಮಾರಿಗೆ ಹರಳೂರು-ಕಸವನಹಳ್ಳಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಮೃತ ರವಿ ಕಾರ್ತಿಕೇಯ ಹರಿಯಾಣ ಮೂಲದವನು. ಭಾನುವಾರ ರಾತ್ರಿ ಹೊಸ ವರ್ಷದ ಹಿನ್ನೆಲೆಯಲ್ಲಿ ಮೂವರು ಸಾಫ್ಟ್‌ವೇರ್ ಇಂಜಿನಿಯರ್ ಸ್ನೇಹಿತರ ಜತೆಗೆ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿ ಕೊಂಡು ಸ್ನೇಹಿತರ ಜತೆಗೆ ಆಟೋರಿಕ್ಷಾದಲ್ಲಿ ಬೆಳ್ಳಂದೂರಿನ ಮನೆಗೆ ಹೊರಟ್ಟಿದ್ದರು. ಹರಳೂರು-ಕಸವನಹಳ್ಳಿ ರಸ್ತೆಯಲ್ಲಿ ಏಕಮುಖ ಸಂಚಾರವಿದ್ದರೂ ಆಟೋ ಚಾಲಕ ವಿರುದ್ಧ ದಿಕ್ಕಿನಿಂದ ಹೊರಟ್ಟಿದ್ದಾನೆ. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರೊಂದು ಆಟೋರಿಕ್ಷಾಗೆ ಮುಖಾಮುಖಿ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿ ರಸ್ತೆಗೆ ಉರುಳಿದ ಪರಿಣಾಮ ಆಟೋ ಚಾಲಕ ಹಾಗೂ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ನಾಲ್ವರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರು ರವಿ ಕಾರ್ತಿಕೇಯ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್‌ಗೆ ಡಿಕ್ಕಿ: ಸವಾರ ಸಾವು: ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕಾಚರಕನಹಳ್ಳಿ ನಿವಾಸಿ ಚೇತನ್ (22) ಮೃತ ಸವಾರ. ಪಾರ್ಟಿ ಮುಗಿಸಿಕೊಂಡು ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ. ಈ ವೇಳೆ ಕೊತ್ತನೂರು ಮುಖ್ಯ ರಸ್ತೆಯಲ್ಲಿ ಅತಿವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಚೇತನ್ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಚೇತನ್ ಮೃತಪಟ್ಟಿದ್ದಾನೆ. ಈ ಸಂಬಂಧ ಹೆಣ್ಣೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸವಾರ ಸಾವು: ಇನ್ನು, ಹೊಸವರ್ಷದ ಪಾರ್ಟಿ ಮುಗಿಸಿಕೊಂಡು ರೂಮ್‌ಗೆ ವಾಪಾಸ್ ಆಗುವಾಗ ನಿಯಂತ್ರಣ ತಪ್ಪಿದ ದ್ವಿಚ್ರವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸಿದ್ದಾಪುರ ನಿವಾಸಿ ಧೀರಜ್ (21) ಮೃತ ಸವಾರ. ಈತನ ಸ್ನೇಹಿತ ರಾಕೇಶ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಾನುವಾರ ತಡರಾತ್ರಿ 12.30ರ ಸುಮಾರಿಗೆ ನಲ್ಲೂರಹಳ್ಳಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.