ಸಾರಾಂಶ
ದಾವಣಗೆರೆ: ಮೈಸೂರು, ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ನಂತರ ಬಿಜೆಪಿಗೆ ಮತ್ತಷ್ಟು ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮೂರು ಸುತ್ತು ರಾಜ್ಯಕ್ಕೆ ಮೋದಿ ಬರಲಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ನರೇಂದ್ರ ಮೋದಿ ಆರಂಭಿಸಿದ ನಂತರ ನಿಶ್ಚಿತವಾಗಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಕಳೆದ ಚುನಾವಣೆಯಲ್ಲಿ ನಾವು 26 ಕ್ಷೇತ್ರ ಗೆದ್ದಿದ್ದು, ಈ ಸಲ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಇದರಲ್ಲಿ ಅಚ್ಚರಿಯೇ ಇಲ್ಲ ಎಂದರು.ಒಂದೇ ಸಮೀಕ್ಷೆಯೆಂದು ನಿಖರವಾಗಿ ಹೇಳಲಾಗುವುದಿಲ್ಲ. ಅಂತಿಮವಾಗಿ ಬಿಜೆಪಿಗೆ ದೇಶದಲ್ಲಿ 400ಕ್ಕೂ ಸ್ಥಾನ ಸಿಗಲಿವೆ. ಬಿಜೆಪಿಗೆ ಖಂಡಿತವಾಗಿಯೂ ಒಳ್ಳೆಯ ಸ್ಥಾನ ಬರಲಿವೆ. ಕರ್ನಾಟಕದ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ನರೇಂದ್ರ ಮೋದಿ ಫೋಟೋ ಇಟ್ಟುಕೊಂಡೇ ಚುನಾವಣೆ ಮಾಡುತ್ತಿದ್ದಾರೆ. ದೇಶಕ್ಕೆ ಒಳ್ಳೆಯ ಪ್ರಧಾನಿ ಬೇಕೆಂಬ ಕಾರಣಕ್ಕೆ ಜನರು ಮತ ಹಾಕುತ್ತಾರೆ ಮೋದಿ ಹೆಸರಲ್ಲೇ ಎಲ್ಲರೂ ಗೆಲ್ಲುವಂತಹದ್ದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ಮುನ್ನ ಸೋನಿಯಾ ಗಾಂಧಿ ಅವರ ವಿರುದ್ಧವೂ ಏಕವಚನದಲ್ಲೇ ಮಾತನಾಡುತ್ತಿದ್ದರು. ಯಾರಿಗೂ ಗೌರವ ಕೊಟ್ಟು ಮಾತನಾಡುವ ಅಭ್ಯಾಸವೇ ಸಿದ್ದರಾಮಯ್ಯಗೆ ಇಲ್ಲ. ದೇಶದ ಜನಪ್ರಿಯ ಹಾಗೂ 40 ಕೋಟಿಗೂ ಅಧಿಕ ಜನರ ಮತ ಪಡೆದ ಪ್ರಧಾನಿಗೆ ಕನಿಷ್ಠ ಗೌರವ ಕೊಡಬಹುದಿತ್ತು ಎಂಬುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶಯ. ಇನ್ನಾದರೂ ಸಿದ್ದರಾಮಯ್ಯ ಅವರು ದೇವೇಗೌಡರ ಸಲಹೆ ಸಕಾರಾತ್ಮಕವಾಗಿ ಸ್ವೀಕರಿಸುವುದು ಒಳ್ಳೆಯದು ಎಂದು ತಿಳಿಸಿದರು.ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದಷ್ಟೂ ನಮಗೆ ಒಳ್ಳೆಯದು. ಬಿಜೆಪಿ ಮತ್ತು ಜೆಡಿಎಸ್ ಹಿರಿಯ ನಾಯಕರು ಎಲ್ಲದನ್ನೂ ಪರಿಗಣಿಸಿ, ಲೆಕ್ಕ ಹಾಕಿ ಹೊಂದಾಣಿಕೆ ಮಾಡಿಕೊಂಡಿರುವುದು. ಇದು ಮುಂದಿನ ಹಲವಾರು ದಶಕಗಳವರೆಗೂ ಮುಂದುವರಿಯಲಿ ಎಂಬುದಾಗಿ ಬಿ.ಎಸ್. ಯಡಿಯೂರಪ್ಪನವರ ಆಶಯ. ಅದರಿಂದ ಎರಡೂ ಪಕ್ಷಗಳ ಜೊತೆಗೆ ರಾಜ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ಪ್ರತಾಪ ಸಿಂಹ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- - - (-ಫೋಟೋ: ಪ್ರತಾಪ ಸಿಂಹ)