ಸಾರಾಂಶ
ಸೂರತ್: ಸೂರತ್‌ನ ಕಿಮ್ ರೈಲ್ವೆ ನಿಲ್ದಾಣದ ಬಳಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ರೈಲು ಹಳಿ ತಪ್ಪಿಸುವ ದುಷ್ಕೃತ್ಯದ ಹಿಂದೆ ರೈಲ್ವೆಯ ಮೂರು ಸಿಬ್ಬಂದಿಗಳದ್ದೇ ಕೈವಾಡವಿದ್ದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಒಂದು ದಿನದ ಹೆಚ್ಚುವರಿ ರಜೆ, ಉದ್ಯೋಗದಲ್ಲಿ ಬಡ್ತಿ ಮತ್ತು ಜಾಲತಾಣದಲ್ಲಿ ಫೇಮಸ್ ಆಗಲು ಈ ಮೂವರು ಸಾವಿರಾರು ಜನರ ಜೀವ ಅಪಾಯಕ್ಕೆ ಒಡ್ಡಿದ್ದ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮನೀಶ್ ಕುಮಾರ್, ಸೂರ್ದೇವ್ ಮಿಸ್ತ್ರಿ ಮತ್ತು ಶುಭಮನ್ ಜೈಸ್ವಾಲ್‌ರನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?:ಇತ್ತೀಚೆಗೆ ಕಿಮ್ ರೈಲ್ವೆ ನಿಲ್ದಾಣದ ಬಳಿ ತಪಾಸಣೆ ವೇಳೆ ಹಳಿಗಳನ್ನು ಜೋಡಿಸುವ ಫಿಶ್‌ಪ್ಲೇಟ್ ಮತ್ತು 60ಕ್ಕೂ ಹೆಚ್ಚು ಬೋಲ್ಟ್‌ಗಳನ್ನು ಕಳಚಿ ಇಟ್ಟಿರುವ ವಿಷಯವನ್ನು ತಾನು ಪತ್ತೆ ಹಚ್ಚಿರುವುದಾಗಿ ಟ್ರ್ಯಾಕ್‌ಮನ್ ಸುಭಾಷ್ ಪೋದಾರ್ ಮೇಲಧಿಕಾರಿಗಳಿಗೆ ತಿಳಿಸಿದ್ದ. ಅಲ್ಲದೆ ದುಷ್ಕೃತ್ಯ ನಡೆಸಿದ್ದ ಮೂವರು ವ್ಯಕ್ತಿಗಳು ತನ್ನನ್ನು ನೋಡಿದ ಕೂಡಲೇ ಪರಾರಿಯಾಗಿದ್ದರು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಆ ಮಾರ್ಗದ ರೈಲುಗಳ ಸಂಚಾರವನ್ನು ಕೆಲ ಕಾಲ ತಡೆದು ದುರಸ್ತಿಯ ಬಳಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ದುಷ್ಕೃತ್ಯ ಬೆಳಕಿಗೆ:ಈ ನಡುವೆ ಘಟನೆ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಮತ್ತು ಎನ್‌ಐಎಗೆ ಸುಭಾಷ್ ಹೇಳಿಕೆಯಲ್ಲಿ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ತಾನು ದುಷ್ಕೃತ್ಯ ಪತ್ತೆ ಮಾಡಿದ್ದೆ ಎಂದು ಸುಭಾಷ್ ಹೇಳುವ ಕೆಲವೇ ಸಮಯದ ಮೊದಲು ಅದೇ ಮಾರ್ಗದಲ್ಲಿ ಎರಡು ರೈಲುಗಳು ಅತ್ಯಂತ ವೇಗವಾಗಿ ಸಾಗಿದ್ದವು. ಒಂದು ವೇಳೆ ಆ ವೇಳೆಗಾಗಲೇ ದುಷ್ಕೃತ್ಯ ನಡೆದಿದ್ದರೆ, ಅದು ರೈಲುಗಳ ಚಾಲಕರಿಗೆ ಗೊತ್ತಾಗಬೇಕಿತ್ತು, ಇಲ್ಲವೇ ಅನಾಹುತ ಸಂಭವಿಸಬೇಕಿತ್ತು. ಆದರೆ ಅದೆರೆಡೂ ಆಗಿರಲಿಲ್ಲ. ಜೊತೆಗೆ ದುಷ್ಕೃತ್ಯ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸುಭಾಷ್ ಚಿತ್ರೀಕರಿಸಿದ್ದ ವೇಳೆಗೂ, ದುಷ್ಕೃತ್ಯ ಪತ್ತೆ ಮಾಡಿದೆ ಎಂದು ಹೇಳಿದ ವೇಳೆಗೂ ಸಾಕಷ್ಟು ಅಂತರವಿತ್ತು. ಇನ್ನೊಂದೆಡೆ ದುಷ್ಕೃತ್ಯ ನಡೆಸಿ ಪರಾರಿಯಾದರು ಎನ್ನಲಾದ ಮೂವರು ವ್ಯಕ್ತಿಗಳು ಸಮೀಪದಲ್ಲೇ ಎಲ್ಲೂ ಬಂದಿದ್ದು ದೃಡಪಟ್ಟಿರಲಿಲ್ಲ.
ಅಲ್ಲದೆ ಮೂವರ ಮೊಬೈಲ್ ತಪಾಸಣೆ ವೇಳೆ ಬೆಳಗ್ಗೆ 2.56 ಮತ್ತು 4.57 ಅವಧಿಯಲ್ಲಿ ಬೋಲ್ಟ್ ಮತ್ತು ಪ್ಲೇಟ್ ಬಿಚ್ಚಿ ಅದರ ವಿಡಿಯೋ ಶೂಟ್ ಮಾಡಿದ್ದರು. ಆದರೆ ಅಧಿಕಾರಿಗಳಿಗೆ ಬೆಳಗ್ಗೆ 5.30ರ ವೇಳೆಗೆ ದುಷ್ಕೃತ್ಯ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದು ಬೆಳಕಿಗೆ ಬಂದಿತ್ತು.ಈ ಹಿನ್ನೆಲೆಯಲ್ಲಿ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ, ಹೆಚ್ಚುವರಿ ರಜೆ, ಸನ್ಮಾನ, ಉದ್ಯೋಗದಲ್ಲಿ ಬಡ್ತಿ, ರಾತ್ರಿ ಪಾಳಿ ಕೆಲಸ (ಹಗಲು ಹೊತ್ತು ಕುಟುಂಬದವರ ಜೊತೆ ಕಾಲ ಕಳೆಯಲು ಸಮಯ ಸಿಗುವ ಅನುಕೂಲ) ಮತ್ತು ಜಾಲತಾಣದಲ್ಲಿ ಫೇಮಸ್ ಆಗಲು ಇಂಥ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.