ಮುಂಟೀಪುರ ಬಳಿ 3 ಹುಲಿ ಪ್ರತ್ಯಕ್ಷ!

| Published : Feb 06 2025, 12:18 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಮುಂಟೀಪುರ ಬಳಿಯ ರಸ್ತೆ ಬದಿಯಲ್ಲಿ ಮೂರು ಹುಲಿಗಳು ಕಾಣಿಸಿಕೊಂಡಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಹುಲಿ ನೋಡಲು ಸಫಾರಿಗೆ ದುಬಾರಿ ಹಣ ಕೊಟ್ಟು ಹೋದರೂ ಹುಲಿಗಳ ದರ್ಶನ ಆಗುವುದಿಲ್ಲ. ಆದರೆ ತಾಲೂಕಿನ ಮುಂಟೀಪುರ ಬಳಿ ಒಂದಲ್ಲ, ಎರಡಲ್ಲ, ಮೂರು ಹುಲಿಗಳು ಮಂಗಳವಾರ ರಾತ್ರಿ ಕಾಣಿಸಿಕೊಂಡಿವೆ.

ಮುಂಟೀಪುರ ಗ್ರಾಮದಿಂದ ಮೂಖಹಳ್ಳಿ ಕಾಲೋನಿಗೆ ತೆರಳುವ ರಸ್ತೆಯ ಸೇತುವೆ ಬಳಿ ತಾಯಿ ಹುಲಿ ಹಾಗೂ ಎರಡು ಹುಲಿ ಮರಿಗಳು ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್‌ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿವೆ. ಕಳೆದ ತಿಂಗಳಿನಿಂದ ಮುಂಟೀಪುರ ಸುತ್ತಮುತ್ತ ಕುರಿ, ಮೇಕೆಗಳು ಬಲಿಯಾಗಿವೆ ಎಂದು ರೈತರು ದೂರಿದ್ದು, ಈಗ ಮೂರು ಹುಲಿಗಳು ಗ್ರಾಮದ ಬಳಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಆರ್‌ಎಫ್‌ಒ ಭೇಟಿ:ಮುಂಟೀಪುರ ಬಳಿ ಹುಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಬಂದ ಬಳಿಕ ಗುಂಡ್ಲುಪೇಟೆ ಪ್ರಭಾರ ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ಹಾಗೂ ಸಿಬ್ಬಂದಿ ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿದ್ದಾರೆ. ಕನ್ನಡಪ್ರಭದೊಂದಿಗೆ ಆರ್‌ಎಫ್‌ಒ ಶಿವಕುಮಾರ್‌ ಮಾತನಾಡಿ, ಓಂಕಾರ ವಲಯದಿಂದ ಹುಲಿಗಳು ಬಂದಿರುವ ಸಾಧ್ಯತೆ ಇದೆ. ಸಿದ್ದಯ್ಯನಪುರ ಕಾಲೋನಿ ಬಳಿಯ ಗುಡ್ಡದ ಕಡೆ ಹುಲಿಗಳು ಹೋಗಿವೆ ಎಂದರು. ಹುಲಿ, ಹುಲಿ ಮರಿಗಳು ಕಾಣಿಸಿಕೊಂಡ ಸ್ಥಳ ಖಚಿತವಾಗಿದೆ. ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಿಗಾ ಇಡಲಿದೆ ಎಂದರು.

ಸೆರೆ ಹಿಡಿಯಲು ಒತ್ತಾಯ:

ಗ್ರಾಮದ ಬಳಿಯೇ ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆ ಅರಣ್ಯ ಇಲಾಖೆ ಹುಲಿಗಳನ್ನು ಸೆರೆ ಹಿಡಿದು ರೈತರು ಹಾಗೂ ಸಾರ್ವಜನಿಕರ ಆತಂಕ ನಿವಾರಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.