ಹಾನಗಲ್ಲ ತಾಲೂಕಿಗೆ 3 ಪಶು ಚಿಕಿತ್ಸಾಲಯ ಮಂಜೂರು

| Published : Aug 31 2025, 02:00 AM IST

ಸಾರಾಂಶ

ಮಾಸನಕಟ್ಟಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಬೇಕು ಎನ್ನುವ ಬೇಡಿಕೆ ಹಲವು ದಶಕಗಳಿಂದ ಇತ್ತು. ಅದೀಗ ಈಡೇರಿದೆ

ಹಾನಗಲ್ಲ: ತಾಲೂಕಿನಲ್ಲಿ 80 ಹಾಲು ಉತ್ಪಾದಕ ಸಂಘಗಳಿದ್ದು, ನಿತ್ಯ 20 ಸಾವಿರ ಲೀ.ಹಾಲು ಉತ್ಪಾದಿಸಲಾಗುತ್ತಿದೆ. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ ₹5 ರಂತೆ ಒಟ್ಟು ₹1 ಲಕ್ಷ ಪ್ರೋತ್ಸಾಹಧನ ನೀಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿ, ಮಾಸನಕಟ್ಟಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಬೇಕು ಎನ್ನುವ ಬೇಡಿಕೆ ಹಲವು ದಶಕಗಳಿಂದ ಇತ್ತು. ಅದೀಗ ಈಡೇರಿದೆ. ಈ ವರ್ಷ ತಾಲೂಕಿನಲ್ಲಿ ಹೊಸದಾಗಿ 3 ಪಶು ಚಿಕಿತ್ಸಾಲಯಗಳು ಮಂಜೂರಾಗಿದ್ದು, ಪಶು ಚಿಕಿತ್ಸಾಲಯಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಸಹ ಕಾಳಜಿ ವಹಿಸಲಾಗಿದೆ. ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಅನುಗ್ರಹ ಯೋಜನೆಯಡಿ ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ ₹15 ಸಾವಿರ, ಕುರಿಮೇಕೆಗಳ ಮಾಲೀಕರಿಗೆ ₹7,500 ಪರಿಹಾರ ವಿತರಿಸಲಾಗುತ್ತಿದ್ದು, ಪ್ರಸಕ್ತ ವರ್ಷ ತಾಲೂಕಿನಲ್ಲಿ ₹5 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.

ತಾಲೂಕಿಗೆ ಮುಖ್ಯಮಂತ್ರಿಗಳು ₹50 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪ್ರತಿ ಗ್ರಾಪಂಗಳಿಗೆ ₹60ರಿಂದ ₹ 80 ಲಕ್ಷ ಅನುದಾನ ಒದಗಿಸಲಾಗಿದ್ದು, ಶೀಘ್ರ ಕಾಮಗಾರಿಗಳು ಆರಂಭಗೊಳ್ಳಲಿವೆ. ಮಹತ್ವಾಕಾಂಕ್ಷೆಯ ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಗೆ ₹220 ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಮುಖಂಡ ರಾಜಶೇಖರಯ್ಯ ಹಿರೇಮಠ ಮಾತನಾಡಿ, ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಬೇಕು ಎನ್ನುವ ಬೇಡಿಕೆ 40 ವರ್ಷಗಳಿಂದ ಇತ್ತು. ಅದೀಗ ಈಡೇರುತ್ತಿರುವುದು ಈ ಭಾಗದ ಗ್ರಾಮಸ್ಥರಲ್ಲಿ ಹರ್ಷ ತರಿಸಿದೆ. ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಹ ಬಿಡುಗಡೆ ಮಾಡಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಗಂಗಪ್ಪ ಹಿರಗಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಬಗರ್‌ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಪ್ರಮುಖರಾದ ಮಲ್ಲಿಕಾರ್ಜುನ ಬಿಜಾಪುರ, ಗುಡ್ಡನಗೌಡ ಹೊಸಗೌಡ್ರ, ಗಂಗನಗೌಡ ಪಾಟೀಲ, ಸಂಕಪ್ಪ ಸಂಕಣ್ಣನವರ, ಚನ್ನಬಸಪ್ಪ ಬೆಂಡಿಗೇರಿ, ಯಲ್ಲಪ್ಪ ಹಿರಗಪ್ಪನವರ, ಕರಿಯಪ್ಪ ಗುಡ್ಡದ, ಹನುಮಂತಪ್ಪ ತಿಮ್ಮಾಪೂರ, ಜಗದೀಶ್ ಹರಿಜನ, ಮಂಜಪ್ಪ ತಿಮ್ಮಾಪೂರ, ಕೊಟ್ರಮ್ಮ ಚಿಕ್ಕಮಠ, ಜಯಮ್ಮ ಮಳೆಣ್ಣನವರ, ಅಲ್ತಾಹಿರ್ ಕಚವಿ, ಸಿದ್ದು ಓಣಿಕೇರಿ, ರಾಮು ಭಜಂತ್ರಿ, ತಾಪಂ ಇಒ ಪರಶುರಾಮ ಪೂಜಾರ, ಡಾ. ಗಿರೀಶ ರೆಡ್ಡೇರ ಇದ್ದರು.